ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಲಿಂಗಾಯತ ವಿರೋಧ ಕಾರಣವೇ?

ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಲಿಂಗಾಯತ ವಿರೋಧ ಕಾರಣವೇ?

 

 

ಬೆಳಗಾವಿ: ಇತ್ತೀಚಿಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಪಕ್ಷ ಈ ಸಾಧನೆ ಮಾಡಲು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪ್ರಮುಖ ಪಾತ್ರ ವಹಿಸಿರುವ ಕಾರಣ, ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆನ್ನುವ ಚರ್ಚೆಗೆ ಇಂಬು ಬಂದಿದೆ.

 

 

ನಗರದ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಲು ಇಂದು ಮಿಲೇನಿಯಂ ಗಾರ್ಡನ್ ನಲ್ಲಿ ಕರೆಯಲಾಗಿದ್ದ ವಿವಿಧ ಸಂಘಟನೆಗಳ ಸಂವಾದ ಸಭೆಯಲ್ಲಿ ಮಾತನಾಡಿದ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂ ಚರ್ಚೆ ನಡೆಸುವುದಾಗಿ ಅವರು ಹೇಳಿದರು.

 

 

ಈ ನಡುವೆ ಅಭಯ ಪಾಟೀಲ ಅವರ ಲಿಂಗಾಯತ ವಿರೋಧಿ ಧೋರಣೆಯೇ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಎನ್ನುವ ಚರ್ಚೆಗಳು ನಡೆದಿವೆ. ಪಾಲಿಕೆ ಚುನಾವಣೆಯಲ್ಲಿಯೂ ಈ ಕೂಗು ಜೋರಾಗಿ ಕೇಳಿಸಿತ್ತು. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ ಮತ್ತು ಪ್ರಮುಖ ಲಿಂಗಾಯತ ಮುಖಂಡರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

 

 

ಇದಲ್ಲದೆ, ಹಿಂದೆ ನಡೆದ ಕೆಲವು ಘಟನೆಗಳೂ ಕೂಡ ಈಗ ಅಭಯ ಪಾಟೀಲ ಅವರನ್ನು ಕಾಡುತ್ತಿವೆ ಎನ್ನಲಾಗುತ್ತಿದೆ. ವಿಶೇಷವಾಗಿ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಖನಗಾಂವಿ ಅವರ ಮೇಲಿನ ಹಲ್ಲೆ ವಿಚಾರ. ಖನಗಾವಿ ಅವರನ್ನು ಕಚೇರಿಯಿಂದ ಎಳೆದು ತಂದು ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಶಾಸಕ ಅಭಯ ಪಾಟೀಲ ಖನಗಾವಿ ಅವರನ್ನು ಕಾಲಿನಿಂದ ಒದೆಯುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದವು. ಇದರಿಂದ ರಾಜ್ಯದಾದ್ಯಂತ ಎಂಜಿನಿಯರ್ ಗಳು ಪ್ರತಿಭಟನೆ ನಡೆಸಿದ್ದರು. ವಿಶೇಷವಾಗಿ ಲಿಂಗಾಯತರು ಆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ವಿಶೇಷವೆಂದರೆ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗ ಹರಸಾಹಸಪಟ್ಟು ಪ್ರತಿಭಟನಾಕಾರರನ್ನು ಮನವೊಲಿಸಿದ್ದರು.

 

 

ನಗರದಲ್ಲಿನ ಒಬ್ಬ ಪ್ರಮುಖ ಲಿಂಗಾಯತ ಉದ್ಯಮಿ ಮೇಲೆ ನಡೆಸಿದ ಹಲ್ಲೆಯ ಬಗ್ಗೆಯೂ ಲಿಂಗಾಯತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಮುಖವಾಗಿ ಎರಡೂ ಹಲ್ಲೆಯ ಘಟನೆಗಳು ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಪ್ರಮುಖ ಕಾರಣ ಎಂದು ಬಿಜೆಪಿ ವಲಯದಲ್ಲಿಯೇ ಚರ್ಚೆ ನಡೆಯುತ್ತಿದೆ. ಇದೆಲ್ಲವನ್ನೂ ಮೀರಿ, ಹಿಂದಿನದೆಲ್ಲವನ್ನು ಮರೆತು ಪಕ್ಷ ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.