ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಗದ್ದಲ; ಎಂಇಎಸ್ ಗೆ ವರವಾಗುತ್ತಾ ಮತಗಳ ವಿಭಜನೆ?

ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಗದ್ದಲ; ಎಂಇಎಸ್ ಗೆ ವರವಾಗುತ್ತಾ ಮತಗಳ ವಿಭಜನೆ?

 

ಬೆಳಗಾವಿ: ಮೊದಲ ಬಾರಿಗೆ ಬೆಳಗಾವಿ ಮಹಾನಗರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಎಂಬತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ಕನ್ನಡ ಸಂಘಟನೆಗಳ ಮುಖಂಡರಲ್ಲಿ ಆತಂಕ ಮೂಡಿಸಿದೆ. ಪಕ್ಷಗಳ ನಡುವಿನ ಪೈಪೋಟಿಯಿಂದ ಮತಗಳ ವಿಭಜನೆಯಾಗಿ ಎಲ್ಲಿ ಮತ್ತೆ ಎಂಇಎಸ್ ಗೆ ಅನುಕೂಲವಾಗುತ್ತಾ ಎನ್ನುವ ಅನುಮಾನ ಕಾಡುತ್ತಿದೆ.

 ಮೊದಲು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪಕ್ಷದ ಚಿಹ್ನೆಯ ಮೇಲೆ ಕಣಕ್ಕಿಳಿಸುವುದಾಗಿ ಘೋಷಿಸಿತು. ಅದಕ್ಕೆ ತಕ್ಕಂತೆ ಪಕ್ಷದ ರಾಜ್ಯ ಅಧ್ಯಕ್ಷ ನಳಿನಕುಮಾರ ಕಟಿಲ್ ಕೂಡ ಬೆಳಗಾವಿಗೆ ಆಗಮಿಸಿ ಚುನಾವಣಾ ತಯಾರಿಗೆ ಬಲ ನೀಡಿದರು. ಬಳಿಕ ಆಮ್ ಆದ್ಮಿ ಪಾರ್ಟಿ ಕೂಡ ಎಲ್ಲ ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿಕೊಂಡಿತು. ಇದರಿಂದ ತೆರೆಮರೆಯಲ್ಲಿದ್ದ ಜೆಡಿಎಸ್ ಕೂಡ ಮುಂದೆ ಬಂದು ತಾನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ.

 ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷ ತಡವಾಗಿ ನಿರ್ಣಯಕ್ಕೆ ಬಂದಿದೆ. ಕೆಲವು ಸ್ಥಳೀಯ ಮುಖಂಡರು ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದರೂ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಸೂಚನೆಯ ಮೇರೆಗೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ತಮ್ಮ ತಮ್ಮ ರಾಜಕೀಯ ಕಾರಣಗಳಿಗಾಗಿಯೇ ಕೆಲವು ಮುಖಂಡರು ಪಾಲಿಕೆ ಚುನಾವಣೆಗೆ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸ್ಪರ್ಧೆಗೆ ಇಳಿಯುತ್ತಿರುವುದರಿಂದ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಬಿಟ್ಟುಕೊಡಲು ಬರುವುದಿಲ್ಲ ಎಂದು ಸುರ್ಜೇವಾಲಾ ಖಡಕ್ ಆಗಿ ಹೇಳಿದ್ದಾರೆ. ಸುರ್ಜೇವಾಲಾ ಸೂಚನೆಯ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ನಡುವೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಕೂಡ ತನ್ನ ಅಭ್ಯರ್ಥಿಗಳನ್ನು ಸಿದ್ಧಗೊಳಿಸಿದೆ.

 ಹಲವಾರು ಪಕ್ಷಗಳು ಕಣಕ್ಕೆ ಇಳಿದ ತಕ್ಷಣ ಎಂಇಎಸ್ ಶಕ್ತಿ ಕುಂದುತ್ತದೆ ಎಂದು ಭಾವಿಸಬೇಕಾಗಿಲ್ಲ. ಎಂಇಎಸ್ ಸಂಘಟನೆಗೆ ತನ್ನದೇ ಆದ ಕಟ್ಟರ್ ಮತದಾರರಿದ್ದಾರೆ. ನೇರವಾಗಿ ಎರಡು ಪಕ್ಷಗಳು ಅಥವಾ ಸಂಘಟನೆಗಳ ನಡುವೆ ಪೈಪೋಟಿ ಇಲ್ಲದ ಕಾರಣ ಎಂಇಎಸ್ ವಿರೋಧಿ ಮತಗಳು ಹಲವು ಪಕ್ಷಗಳಲ್ಲಿ ವಿಭಜನೆಯಾಗಿ, ಇದರಿಂದ ಎಂಇಎಸ್ ಗೆ ಅನುಕೂಲವಾಗುವ  ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ ಎನ್ನುವುದು ಕನ್ನಡ ಸಂಘಟನೆಗಳ ಆತಂಕ. ಇದಲ್ಲದೆ, ಕೆಲವು ಪಕ್ಷತರರೂ ಮತಗಳನ್ನು ಒಡೆಯಬಹುದು. ಇದೆಲ್ಲ ಎಂಇಎಸ್ ಗೆ ಅನುಕೂಲವಾಗಬಹುದಾ ಎನ್ನುವ ಗುಮಾನಿ ಕಾಡುತ್ತಿದೆ. “ಯಾವ ಪಕ್ಷದ ಮತಗಳನ್ನು ಇನ್ನಾವ ಪಕ್ಷದ ಅಭ್ಯರ್ಥಿ ತಿನ್ನುತ್ತಾರೋ ಗೊತ್ತಿಲ್ಲ. ಇವರ ಕಾದಾಟದಲ್ಲಿ ಎಂಇಎಸ್ ಗೆ ಲಾಭ ಆಗಬಾರದು ಅಷ್ಟೆ” ಅನ್ನುವುದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಂಬೋಣ.