ಲಾಕ್ ಡೌನ್ ನಂತರದ ಶಾಲೆಗಳು ಹೇಗಿರಲಿವೆ ಗೊತ್ತಾ?

ರವೀಂದ್ರ ಉಪ್ಪಾರ

ಬೆಳಗಾವಿ: ಕೊರೊನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ಮಾಡುವುದು ತಕ್ಷಣದ ಮತ್ತು ತಾತ್ಕಾಲಿಕ ಉಪಾಯ. ಹಾಗಂತ ಲಾಕ್ ಡೌನ್ ಮುಗಿದ ಬಳಿಕ ಕೊರೊನಾ ವೈರಸ್ ಸಂಪೂರ್ಣ ನಿರ್ಮೂಲನೆಗೊಳ್ಳುವುದಿಲ್ಲ. ಮನುಷ್ಯನಿಂದ ಮನುಷ್ಯನಿಗೆ ಹರಡುವ ಈ ಸೋಂಕಿನ ಭೀತಿ ಮುಂದಿನ ಹಲವಾರು ತಿಂಗಳುಗಳ ವರೆಗೆ ಇರಲಿದೆ. ಅದು ನಮ್ಮ ಆರ್ಥಿಕತೆಯ ಜೊತೆಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಬರಲಿವೆ.

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಸರ್ಕಾರಗಳ ಮುಂದೆ ಇರುವ ಅತಿದೊಡ್ಡ ಸವಾಲು ಎಂದರೆ ಶೈಕ್ಷಣಿಕ ವಲಯಕ್ಕೆ ಸಂಬಂಧಪಟ್ಟಿದ್ದು. ಈ ವರ್ಷ ಶಾಲೆಗಳ ಆರಂಭ ಆಗಷ್ಟ ತಿಂಗಳು ದಾಟಿ, ಸಪ್ಟೆಂಬರ್ ವರೆಗೆ ಮುಂದೂಡಿಕೆಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮಕ್ಕಳ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆಗುವುದಿಲ್ಲ. ಕೊರೊನಾದ ಅಪಾಯಕಾರಿ ಅಂಶ ಎಂದರೆ ಇತ್ತೀಚಿಗೆ ಪತ್ತೆಯಾಗಿರುವ ಶೇ 70 ರಷ್ಟು ಸೋಂಕಿತರಲ್ಲಿ ಸೋಂಕಿನ ಯಾವ ಲಕ್ಷಣಗಳೂ ಇರಲಿಲ್ಲ. ಹಾಗೊಂದು ವೇಳೆ ಇದು ಶಾಲಾ ಮಕ್ಕಳಿಗೆ ತಗುಲಿದರೆ ಅದರ ಹರಡುವಿಕೆಯನ್ನು ತಡೆಯುವುದು ಇನ್ನೂ ಕಷ್ಟವಾಗುತ್ತದೆ. ಪಾತಾಳಕ್ಕೆ ಇಳಿಯುತ್ತಿರುವ ನಮ್ಮ ಆರ್ಥಿಕತೆಯನ್ನು ಗಮನಿಸಿದರೆ ಮತ್ತೊಮ್ಮೆ ಲಾಕ್ ಡೌನ್ ಆದರೆ ದೇಶದ ಅರ್ಥಿಕತೆ ಊಹಿಸಲೂ ಆಗದಷ್ಟು ಹಿಂದಕ್ಕೆ ತಳ್ಳಲ್ಪಡುತ್ತದೆ.

ಶಾಲೆಗಳ ಆರಂಭಕ್ಕೆ ಅವಕಾಶ ಕೊಡುವ ವಿಷಯ ಸರ್ಕಾರಗಳ ಮುಂದಿನ ದೊಡ್ಡ ಸವಾಲಾಗಲಿದೆ. ಅದಕ್ಕಾಗಿಯೇ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗುತ್ತದೆ. ಶಾಲೆಗಳು ಹೇಗಿರಬೇಕು, ಕೊಠಡಿಗಳು ಹೇಗಿರಬೇಕು, ತರಗತಿಗಳಲ್ಲಿ ಮಕ್ಕಳ ನಡುವಿನ ಅಂತರ ಎಷ್ಟಿರಬೇಕು, ಮಾಸ್ಕ್ ಕಡ್ಡಾಯ ಮಾಡಬೇಕೇ?, ಎಷ್ಟು ಸಮಯಕ್ಕೊಮ್ಮೆ ಕೈ ತೊಳೆಯಬೇಕು ಇವೆಲ್ಲವನ್ನು ಸರ್ಕಾರ ನಿರ್ಧರಿಸಬೇಕಾಗಿದೆ.

ಸದ್ಯದ ಶಾಲೆಗಳಲ್ಲಿ ಪ್ರತಿ ತರಗತಿಯಲ್ಲಿ ಸರಾಸರಿ 30 ರಿಂದ 50 ರ ವಿದ್ಯಾರ್ಥಿಗಳು ಇರುವುದು ಕಾಣುತ್ತದೆ. ಸಾಮಾಜಿಕ ಅಂತರ ಕಾಯ್ದೊಕೊಳ್ಳುವುದನ್ನು ಕಡ್ಡಾಯ ಮಾಡಿದರೆ, ಈ ಸಂಖ್ಯೆ ಅರ್ಧ ಅಥವಾ ಅರ್ಧಕ್ಕಿಂತಲೂ ಕಡಿಮೆಯಾಗಬೇಕಾಗುತ್ತದೆ. ಅಂದರೆ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಕೊಠಡಿಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ. ಅಷ್ಟು ಕೊಠಡಿಗಳ ವ್ಯವಸ್ಥೆ ಹೇಗೆ ಎನ್ನುವುದೇ ಸರ್ಕಾರದ ತಲೆನೋವು. ಇನ್ನು ಖಾಸಗಿ ಸಂಸ್ಥೆಗಳಿಗೂ ಇದು ಅನ್ವಯವಾಗಲಿದ್ದು, ಒಟ್ಟಾರೆ ಶೈಕ್ಷಣಿಕ ವಲಯಕ್ಕೆ ಕಠಿಣ ಸವಾಲುಗಳು ಎದುರಾಗಲಿವೆ.

ಇದರ ಪರಿಣಾಮವಾಗಿ ಶಿಕ್ಷಣ ಸಂಸ್ಥೆಗಳ ಫೀಜು ಹೆಚ್ಚಿಗೆಯಾಗುವ ಸಾಧ್ಯತೆಯಿದೆ. ಈಗಾಗಲೇ ಅರ್ಥಿಕ ನಷ್ಟದಲ್ಲಿರುವ ಕೈಗಾರಿಕೆಗಳು ನೌಕರರನ್ನು ಮನೆಗೆ ಕಳಿಸಲು ಆರಂಭಿಸಿವೆ. ಲಾಕ್ ಡೌನ್ ಬಳಿಕ ಲಕ್ಷಾಂತರ ಖಾಸಗಿ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ನೌಕರಿ ಉಳಿದರೂ ಸಂಬಳ ಕಡಿತವಾಗುವ ಸಾಧ್ಯತೆ ಇದೆ. ಇದೆಲ್ಲದರ ನಡುವೆ ಮಕ್ಕಳ ಶಾಲೆಯ ಫೀಜು ಕೂಡ ಹೆಚ್ಚಾದರೆ, ಪಾಲಕರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಲಿದೆ. ವಿಶೇಷವಾಗಿ ಮಧ್ಯಮ ವರ್ಗದವರು ಇದರಿಂದ ಸಾಕಷ್ಟು ಪ್ರಮಾಣದಲ್ಲಿ ತೊಂದರೆಗೀಡಾಗಲಿದ್ದಾರೆ.

ಶಾಲಾ ತರಗತಿಗಳ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ ಮತ್ತು ಇತರೆ ವಾಹನಗಳಲ್ಲಿಯೂ ಸಾಮಾಜಿಕ ಅಂತರ ಕಡ್ಡಾಯ ಆಗುವುದರಿಂದ, ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣ ಕೊಡಬೇಕಾಗಿ ಬರಬಹುದು. ಇದು ಶೈಕ್ಷಣಿಕ ವಲಯದ ಮಾತಾದರೆ ಉಳಿದ ಎಲ್ಲ ವಲಯಗಳ ಮೇಲೂ ಕೊರೊನಾ ತನ್ನದೇ ಪರಿಣಾಮ ಬೀರಲಿದೆ. ಸಾಮಾಜಿಕ ಅಂತರ ಎನ್ನುವುದು ಬಸ್ಸು, ರೈಲು, ಟ್ಯಾಕ್ಸಿ ಸೇರಿದಂತೆ ವಿಮಾನಯಾನಕ್ಕೂ ಅನ್ವಯ ಆಗಲಿದೆ. ಹೀಗಾಗಿ ಪ್ರಯಾಣದ ದರ ಸಹಜವಾಗಿಯೇ ಹೆಚ್ಚಾಗಲಿದೆ.

ರೇಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿಯವರ ಜೊತೆಗೆ ಸಹಜ ಮಾತುಕತೆಗೆ ಇಳಿದಾಗ ಈ ಮೇಲಿನ ವಿಷಯಗಳು ಚರ್ಚೆಗೆ ಬಂದವು. ಸುರೇಶ ಅಂಗಡಿ ಅವರ ಪ್ರಕಾರ ಮುಂಬರುವ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಬರಲಿದೆ.  ಕೃಷಿ ಭೂಮಿಯ ದರವೂ ಏರಿಕೆಯಾಗಲಿದೆ. ಕೃಷಿಯನ್ನು ನೋಡುವ ದೃಷ್ಟಿ ಇನ್ನು ಮುಂದೆ ಬದಲಾಗಲಿದೆ. ಹಳ್ಳಿಗಳಲ್ಲಿ ಸಾಕಷ್ಟು ಜಮೀನು ಇದ್ದರೂ ಕೆಲವರು ಪಟ್ಟಣಗಳ ಬಣ್ಣದ ಬದುಕಿಗೆ ಮಾರು ಹೋಗಿದ್ದಾರೆ. ಸಣ್ಣ ಸಂಬಳದ ಕೆಲಸವಾದರೂ ಸರಿ ಎನ್ನುತ್ತ ಪಟ್ಟಣಗಳಲ್ಲಿಯೇ ನೆಲೆಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಅವರಲ್ಲಿ ಬಹುತೇಕರು ಊರು ಸೇರಿಕೊಂಡಿದ್ದಾರೆ. ಪಟ್ಟಣಗಳಿಗಿಂತ ಹಳ್ಳಿಗಳು ಸೇಫ್ ಅಂತ ಅವರಿಗೆ ಅನ್ನಿಸಿ ಅಲ್ಲೇ ಉಳಿದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೃಷಿ ಕೈಗಾರಿಕೆ ಪರಿಕಲ್ಪನೆ ಮುಂಚೂಣಿಗೆ ಬರಲಿದೆ ಎನ್ನುತ್ತಾರೆ ಬೆಳಗಾವಿಯ ಸಂಸದ ಸುರೇಶ ಅಂಗಡಿ.

Leave a Reply

Your email address will not be published. Required fields are marked *

You cannot copy content of this page