ಬೆಳಗಾವಿ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಲು ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ಧರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋಲಲು ಮೂರೂ ಪಕ್ಷಗಳು ಕಾರಣ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಬಿಜೆಪಿಯಿಂದ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ನಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಕಣದಲ್ಲಿದ್ದರು. ಲೋಕಲ್ ಕಾರ್ಯಕರ್ತರು ಸ್ವಲ್ಪ ಹೆಚ್ಚು ಕಡಿಮೆ ಮಾಡಿರಬಹುದು. ಅದನ್ನು ಬಿಟ್ಟರೆ ಮುಖಂಡರಾರೂ ಇದಕ್ಕೆ ಕಾರಣರಾಗಿಲ್ಲ ಎಂದು ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.
“ರಾಜಕೀಯದಲ್ಲಿ ಯಾರಾದ್ರೂ ಸ್ಟ್ರಾಂಗ್ ಆಗಿದ್ದರೆ ಅವರನ್ನು ವೀಕ್ ಮಾಡಲು ಯತ್ನಿಸುವುದು ಇದ್ದದ್ದೆ. ಎಲ್ಲಾ ಪಕ್ಷಗಳಲ್ಲಿಯೂ ಈ ರೀತಿ ಆಗುತ್ತದೆ. ನಾವು ಅದನ್ನೆಲ್ಲ ಎದುರಿಸಿಕೊಂಡು ಬೆಳೆಯಬೇಕು. ರಾಜಕಾರಣವೇ ಹಾಗೆ. ಅದು ಯಾವ ಪಕ್ಷದಲ್ಲಿ ಯಾರನ್ನೂ ಬಿಟ್ಟಿಲ್ಲ. ಅಷ್ಟೊಂದು ಕೆಲಸ ಮಾಡಿದ್ದರೂ ಜನ ಸಿದ್ಧರಾಮಯ್ಯನವರಿಗೆ ಓಟು ಹಾಕಲಿಲ್ಲ ಅನ್ನೋದೇ ಬೇಜಾರು” ಎಂದು ಶಿವಕುಮಾರ ಬೇಸರ ವ್ಯಕ್ತಪಡಿಸಿದರು.
“ಕೆಲವು ಕಾಂಗ್ರೆಸ್ ಮುಖಂಡರೇ ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಗೆ ಕಾರಣ. ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆಂದು ಈ ಕುತಂತ್ರ ಮಾಡಿದ್ದರು” ಎಂದು ಮೈಸೂರಿನಲ್ಲಿ ಸಿದ್ಧರಾಮಯ್ಯ ನೀಡಿದ್ದ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.