ಛತ್ರಪತಿ ಶಿವಾಜಿ ಮಹಾರಾಜರು ಬೆಳಗಾವಿಗೆ ಭೇಟಿ ಕೊಟ್ಟಿದ್ದರೇ? ಹೊಸ ದಾಖಲೆಯ ಸತ್ಯಾಸತ್ಯತೆ ಏನು?


ಬೆಳಗಾವಿ: ‌ಹಿಂದೂಗಳ‌ ಆರಾಧ್ಯದೈವ ಛತ್ರಪತಿ ಶಿವಾಜಿ ಮಹಾರಾಜರು ಕುಂದಾನಗರ ಬೆಳಗಾವಿಗೆ ಭೇಟಿ ನೀಡಿದ್ದರೇ? ಈ ನೆಲಕ್ಕೆ ಅವರ ಪಾದಸ್ಪರ್ಶವಾಗಿತ್ತೇ?


ಇದುವರೆಗೆ ಶಿವಾಜಿ ಮಹಾರಾಜರ ಬೆಳಗಾವಿ ಭೇಟಿಯ ಬಗ್ಗೆ ಎಲ್ಲಿಯೂ‌ ಚರ್ಚೆಯಾಗಿಲ್ಲ. ಈ ಕುರಿತಂತೆ ‌ದಾಖಲೆಗಳೂ ಇರಲಿಲ್ಲ. ಆದರೆ ಇದೀಗ ಮಿರಜದ ಇತಿಹಾಸ ಸಂಶೋಧಕ ಮಾನಸಿಂಗರಾವ್ ಕುಮಠೇಕರ‌ ಅವರು ಈ ವಿಷಯದ ಮೇಲೆ‌ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಈ ಕುರಿತಾದ ದಾಖಲೆಯೊಂದನ್ನೂ ಪ್ರಸ್ತುತಪಡಿಸಿದ್ದಾರೆ. 


 ‘ತರುಣ ಭಾರತ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕುಮಠೇಕರ ಅವರ ಲೇಖನದಲ್ಲಿ ಶಿವಾಜಿ ಮಹಾರಾಜರು ಸನ್‌ 1673 ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು‌ ಎಂದು ಹೇಳಲಾಗಿದೆ.‌ ಬೆಳಗಾವಿಯಲ್ಲಿನ‌ ಐತಿಹಾಸಿಕ ಶೇರಖಾನ ಮಸೀದಿಗೆ ದಾನವಾಗಿ ನೀಡಿದ ಜಮೀನಿಗೆ ಸಂಬಂಧಪಟ್ಟಂತೆ ಉಂಟಾದ‌ ವ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳಲು ಮಹಾರಾಜರು ಬೆಳಗಾವಿಗೆ ಭೇಟಿ ನೀಡಿದ್ದರು. ಆಗ ಮಹಾರಾಜರ ಸಮಕ್ಷಮದಲ್ಲಿ ವಿವಾದ ಬಗೆಹರಿದಿತ್ತು. ಆಗ ಮೂಡಿ ಲಿಪಿಯಲ್ಲಿ ರಚಿಸಲಾಗಿದ್ದ ಮಹಜರ್ ನ ಪ್ರತಿಯನ್ನು ಕುಮಠೇಕರ ಅವರು ತಮ್ಮ ‌ವಾದಕ್ಕೆ‌ ದಾಖಲೆಯಾಗಿ ನೀಡಿದ್ದಾರೆ.


ಶಿವಾಜಿ‌ ಮಹಾರಾಜರು 1673 ರ ಅಕ್ಟೋಬರ್‌ ದಿಂದ ಡಿಸೆಂಬರ್ ವರೆಗಿನ‌ ಕಾಲಾವಧಿಯಲ್ಲಿ ಈಗಿನ ಕರ್ನಾಟಕದ ಕೆಲವು ಪ್ರಾಂತಗಳ ಮೇಲೆ ದಂಡೆತ್ತಿ ಬಂದಿದ್ದರು. ಕೆಲವು ಕೋಟೆಗಳನ್ನು ಗೆದ್ದುಕೊಂಡಿದ್ದರು. ಆ ಸಂದರ್ಭದಲ್ಲಿ ಮಹಾರಾಜರು ಕಾರವಾರ ವರೆಗೆ ಮಾತ್ರ ಬಂದಿರುವ ಎಂದು ಇದುವರೆಗೆ ಹೇಳಲಾಗುತ್ತಿತ್ತು. ಆದರೆ ಈಗ ಸಂಶೋಧಕ ಕುಮಠೇಕರ ಮಂಡಿಸಿರುವ ವಾದದ ಪ್ರಕಾರ ಅವರು‌ ಬೆಳಗಾವಿಗೂ ಬಂದಿದ್ದರು.


ಆದರೆ ಕುಮಠೇಕರ ಅವರು ಹೇಳುವ ಪ್ರಕಾರ ಬೆಳಗಾವಿಯ ಹೆಸರು ಆಗ ಮುಸ್ತಫಾಬಾದ್ ಆಗಿತ್ತು. ಕುಮಠೇಕರ ಅವರ ಈ ವಾದದಲ್ಲಿ ಎಷ್ಟು ಹುರುಳಿದೆ ಎನ್ನುವುದು ಸಂಶೋಧನೆಯಿಂದ ತಿಳಿಯಬೇಕಿದೆ. 
ಬೆಳಗಾವಿಯ ಮೂಲ ಹೆಸರು ವೇಣುಗ್ರಾಮ ಎಂದಾಗಿತ್ತು ಎಂದು ಬೆಳಗಾವಿಗರ ತಿಳಿವಳಿಕೆ. ಆದರೆ ಕುಮಠೇಕರ ಅವರ ಪ್ರಕಾರ 1686 ರಲ್ಲಿ ಮುಘಲರು ಈ ಪ್ರದೇಶವನ್ನು ಗೆದ್ದುಕೊಂಡಾಗ ಇದರ ಹೆಸರು ಅಜಂ ನಗರ ಎಂದು ಇಟ್ಟಿದ್ದರು. ಬಳಿಕ ಆದಿಲ್ ಶಾಹಿ ಅರಸರ ಕಾಲದಲ್ಲಿ‌ ಇದು ಮುಸ್ತಫಾಬಾದ್ ಆಯಿತು ಎಂಬುದು ಕುಮಠೇಕರ ‌ಅವರ ವಾದ.


ಕುಮಠೇಕರ ಅವರು ಪ್ರಸ್ತುತಪಡಿಸಿರುವ ದಾಖಲೆಯಲ್ಲಿ ‘ಶಿವಾಜಿಚಿ‌ ಗಡಬಡ’ ಎನ್ನುವ ಉಲ್ಲೇಖವಿದೆ. ಅಂದರೆ ಮಸೀದಿಯ‌ ವಿವಾದ‌ ಬಗೆಹರಿಸಲು ಶಿವಾಜಿ‌ ಮಹಾರಾಜರು ಅವಸರದಲ್ಲಿ ಬೆಳಗಾವಿಗೆ ಬಂದು ಹೋಗಿದ್ದರಂತೆ. ಕುಮಠೇಕರ ಅವರ ವಾದದಲ್ಲಿ ಎಷ್ಟು ಸತ್ಯಾಂಶ ಇದೆ‌ ಎನ್ನುವುದು ತಿಳಿಯಲು‌ ಮತ್ತಷ್ಟು ಆಳವಾದ ಸಂಶೋಧನೆ ನಡೆಯಬೇಕಿದೆ.


ಮೊಘಲರು ಮತ್ತು ಆದಿಲ್ ಶಾಹಿಗಳಿಗಿಂತ ಮೊದಲು‌ ಬೆಳಗಾವಿಯನ್ನು ರಟ್ಟರು, ಕದಂಬರು ಮತ್ತು ವಿಜಯನಗರದ ಅರಸರು ಆಳಿದ್ದರು.

Leave a Reply

Your email address will not be published. Required fields are marked *

You cannot copy content of this page