ಚಿಕ್ಕೋಡಿ ಬಳಿಕ ಮಂಡ್ಯಕ್ಕೂ ಬಂತು ಅಂಬ್ಯುಲನ್ಸ್ ನಲ್ಲಿ ಮುಂಬೈ ಶವ; ಅಲ್ಲಿಯ ನಾಯಕರು ಮಾಡಿದ್ದೇನು? ಇಲ್ಲಿಯವರು ಮಾಡುತ್ತಿರುವುದೇನು?

ಬೆಳಗಾವಿ: ಅಂಬ್ಯುಲನ್ಸ್ ನಲ್ಲಿ ಮುಂಬೈನಿಂದ ವ್ಯಕ್ತಿಯ ಮೃತದೇಹ ತಂದು ಮಂಡ್ಯದ ಮಳವಳ್ಳಿಯಲ್ಲಿ ನಿನ್ನೆ ರಾತ್ರಿ ಅಂತ್ಯಸಂಸ್ಕಾರ ಮಾಡಿರುವ ವಿಷಯ ಈಗ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ಮೃತದೇಹದ ಜೊತೆ ಬಂದಿದ್ದ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮಂಡ್ಯದ ಜನರು ಗಾಬರಿಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅಲ್ಲಿಯ ಎಲ್ಲ ನಾಯಕರು ಇದರ ಸಮಗ್ರ ತನಿಖೆಗೆ ಆಗ್ರಹಿಸುತ್ತಿದ್ದಾರೆ.

ಆದರೆ ಇದೇ ಮಾದರಿಯಲ್ಲಿ ಮುಂಬೈನಿಂದ ವೃದ್ಧೆಯೋರ್ವಳ ಶವವನ್ನು ಕಾನೂನು ಬಾಹಿರವಾಗಿ ಚಿಕ್ಕೋಡಿ ತಾಲೂಕಿನ ಮಲಿಕವಾಡಕ್ಕೆ ತಂದು ಏಪ್ರಿಲ್ 27 ರ ಮಧ್ಯರಾತ್ರಿ ರಹಸ್ಯವಾಗಿ ಶವಸಂಸ್ಕಾರ ಮಾಡಲಾಗಿತ್ತು. ಈ ವಿಷಯ ಜಿಲ್ಲಾಡಳಿತಕ್ಕಾಗಲೀ, ಇಲ್ಲಿಯ ಜನಪ್ರತಿನಿಧಿಗಳಿಗೆ ಆಗಲೀ ಗಂಭೀರ ಅನಿಸಿಲ್ಲ. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದರಾದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಏಕೆ, ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರು ವೈದ್ಯಕೀಯ ಪರೀಕ್ಷೆಯನ್ನೂ ಇದುವರೆಗೆ ಮಾಡಿಸಲಾಗಿಲ್ಲ. ಜಿಲ್ಲಾಡಳಿತವು ಕೊರೊನಾ ತಡುಗಟ್ಟುವಲ್ಲಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಮೂಲಗಳ ಪ್ರಕಾರ ಚಿಕ್ಕೋಡಿ ತಾಲೂಕಿನ ಮಲಿಕವಾಡಕ್ಕೆ ಮುಂಬೈ ವೃದ್ಧೆಯ ಶವವನ್ನು ತಂದಿದ್ದ ಅಂಬ್ಯುಲನ್ಸ್ ಗೆ ಕರ್ನಾಟಕದಲ್ಲಿ ಪ್ರವೇಶಿಸಲು ಪರವಾನಗಿ ಇರಲಿಲ್ಲ. ಆದರೂ ಅನಧಿಕೃತವಾಗಿ ಗಡಿದಾಟಿ ಬಂದು ರಾಜ್ಯದ ಗಡಿಗ್ರಾಮದಲ್ಲಿ ಶವಸಂಸ್ಕಾರ ಮಾಡಲಾಗಿದೆ. ಜಿಲ್ಲಾಡಳಿತದ ಯಾವ ಅಧಿಕಾರಿಯ ಗಮನಕ್ಕೂ ತಾರದೆ ಈ ಕೃತ್ಯ ಎಸಗಲಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೇವಲ ಐದು ಜನ ಮಾತ್ರ ಶವಸಂಸ್ಕಾರ ಮಾಡಿದ್ದಾರೆ. ಪೊಲೀಸರು ಅವರ ವಿಚಾರಣೆ ನಡೆಸಿಲ್ಲ. ಕಾಟಾಚಾರಕ್ಕೆ ಎಂಬಂತೆ ಅವರನ್ನು ಹೋಂ ಕ್ವಾರಂಟೈನ್ ಮಾಡಿ ಕೈಬಿಡಲಾಗಿದೆ. ಆದರೆ, ಅಂದಿನಿಂದ ಗ್ರಾಮಸ್ಥರು ನಿದ್ದೆಗೆಟ್ಟಿದ್ದಾರೆ. ಚಿಕ್ಕೋಡಿ ತಹಶೀಲದಾರ ಅವರು ಸ್ಥಳೀಯ ಪಿಡಿಓಗೆ ನೋಟೀಸ್ ಜಾರಿ ಮಾಡಿ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನೆ ಕುಳಿತಿದ್ದಾರೆ.

ಶವಸಂಸ್ಕಾರದಲ್ಲಿ ಭಾಗವಹಿಸಿದವರನ್ನು ಕೂಡಲೇ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದರೂ, ಆರೋಗ್ಯ ಇಲಾಖೆಯು ಗ್ರಾಮಸ್ಥರ ಕೋರಿಕೆಗೆ ಕಿವಿಗೊಟ್ಟಿಲ್ಲ. ಇನ್ನು ಸ್ಥಳೀಯ ಜನಪ್ರತಿನಿಧಿಗಳಿಗಂತೂ ಇದೊಂದು ಗಂಭೀರ ವಿಷಯ ಅಂತಲೇ ಅನಿಸಿಲ್ಲ. ಇದೇ ನಮ್ಮ ನಾಯಕರು ಮತ್ತು ದಕ್ಷಿಣ ಕರ್ನಾಟಕದ ರಾಜಕೀಯ ನಾಯಕರಲ್ಲಿ ಇರುವ ವ್ಯತ್ಯಾಸ ಇರಬೇಕು. ಈಗ ಮಂಡ್ಯದಲ್ಲಿ ಇಂತಹದೇ ಪ್ರಕರಣ ಮರುಕಳಿಸಿದ್ದರಿಂದ ಮತ್ತು ರಾಜ್ಯದಲ್ಲಿ ಚರ್ಚೆಯಾಗುತ್ತಿರುವುದರಿಂದ ಮಲಿಕವಾಡದಲ್ಲಿ ನಡೆದ ಪ್ರಕರಣಕ್ಕೆ ಮತ್ತೆ ಜೀವ ಬಂದಂತಾಗಿದೆ.

ಮುಂಬೈನ ಪನವೆಲ್ ನಿಂದ ತರಲಾಗಿದ್ದ ವೃದ್ಧೆಯ ಮೃತದೇಹವನ್ನು ಗ್ರಾಮಸ್ಥರಿಗೂ ಗೊತ್ತಾಗದ ಹಾಗೆ ರಹಸ್ಯವಾಗಿ ದಹನ ಮಾಡಲಾಗಿದೆ. ಅಂಬ್ಯುಲನ್ಸ್ ನಲ್ಲಿ ಬಂದ ಕೆಲವರು ವಾಪಸ್ ಹೋಗಿದ್ದಾರೆ. ಎಲ್ಲವೂ ರಹಸ್ಯಮಯವಾಗಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ನಿರ್ಲಕ್ಷದಿಂದ ನಾಳೆ ಗ್ರಾಮದಲ್ಲಿ ಕೊರೊನಾ ಪ್ರಕರಣವೇನಾದರೂ ಕಂಡು ಬಂದರೆ, ಆ ಭಾಗದ ಜನರು ಇಲ್ಲಿಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತವನ್ನು ಕ್ಷಮಿಸುವುದಿಲ್ಲ.

Leave a Reply

Your email address will not be published. Required fields are marked *

You cannot copy content of this page