ಪರಿಷತ್ ಚುನಾವಣೆ; ಬೆಳಗಾವಿಯಲ್ಲಿ ಕುತೂಹಲ ಉಳಿಸಿಕೊಂಡಿರುವ ಎರಡನೇ ಅಭ್ಯರ್ಥಿ ಆಯ್ಕೆ; ಮಹಾಂತೇಶ ಕವಟಗಿಮಠಗೆ ಮತ್ತೊಮ್ಮೆ ಅದೃಷ್ಟ ಕೈಹಿಡಿಯುತ್ತಾ?

ಪರಿಷತ್ ಚುನಾವಣೆ; ಬೆಳಗಾವಿಯಲ್ಲಿ ಕುತೂಹಲ ಉಳಿಸಿಕೊಂಡಿರುವ ಎರಡನೇ ಅಭ್ಯರ್ಥಿ ಆಯ್ಕೆ; ಮಹಾಂತೇಶ ಕವಟಗಿಮಠಗೆ ಮತ್ತೊಮ್ಮೆ ಅದೃಷ್ಟ ಕೈಹಿಡಿಯುತ್ತಾ?

 

ಬೆಳಗಾವಿ: ಜಿಲ್ಲೆಯಲ್ಲಿನ ಎರಡು ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಮುಗಿದಿದ್ದು, ಅದರಲ್ಲಿ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ ಮೊದಲ ಸ್ಥಾನದಲ್ಲಿ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ ಸ್ಥಾನ ಮತ್ತು ಬಿಜೆಪಿಯ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ 3,715 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದಿರುವುದರಿಂದ ಅವರ ಗೆಲುವು ಖಚಿತಗೊಂಡಿದೆ. ಆದರೆ ಎರಡನೇ ಸ್ಥಾನಕ್ಕಾಗಿ ಲಖನ್ ಮತ್ತು ಕವಟಗಿಮಠ ಇವರಲ್ಲಿನ ಮತಗಳ ಅಂತರ ಕೇವಲ 77 ಆಗಿರುವುದರಿಂದ, ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಹತ್ವ ಪಡೆದುಕೊಂಡಿದೆ.

 

ಎರಡನೇ ಪ್ರಾಸಸ್ತ್ಯದ ಮತಗಳ ಎಣಿಕೆ ಮಧ್ಯಾಹ್ನದ ನಂತರ ಆರಂಭಗೊಂಡಿದ್ದು, ಅದರಲ್ಲಿ ಫಲಿತಾಂಶ ಬರದೆ ಇದ್ದರೆ ಮೂರನೇ ಪ್ರಾಶಸ್ತ್ಯದ ಮತಗಳು ಮತ್ತು ನಂತರ ನಾಲ್ಕನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಲಖನ್ ಲಖನ್ ಜಾರಕಿಹೊಳಿ ಅವರಿಗೆ 2,526 ಮತಗಳ ಮತ್ತು ಮಹಾಂತೇಶ ಕವಟಗಿಮಠ ಅವರಿಗೆ 2454 ಮತಗಳು ಲಭಿಸಿವೆ. ಹೀಗಾಗಿ ಕವಟಗಿಮಠ ಅವರ ಹ್ಯಾಟ್ರಿಕ್ ಬಾರಿಸುವ ಆಸೆ ಇನ್ನೂ ಜೀವಂತವಾಗಿದೆ.

 

ಕಳೆದ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಕೇವಲ 14 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವೀರಕುಮಾರ ಪಾಟೀಲ ವಿರುದ್ಧ ಗೆಲುವು ಸಾಧಿಸಿದ್ದರು. ನಾಲ್ಕನೇ ಪ್ರಾಶಸ್ತ್ಯದ ಮತಗಳ ವರೆಗೂ ಮತ ಎಣಿಕೆ ನಡೆದಿತ್ತು. ತಡರಾತ್ರಿವರೆಗೂ ಮತ ಎಣಿಕೆ ನಡೆದು ಕೊನೆ ಕ್ಷಣದಲ್ಲಿ ಕವಟಗಿಮಠ ಅವರಿಗೆ ಗೆಲುವು ಒಲಿದಿತ್ತು. ಮತ್ತೊಮ್ಮೆ ಕವಟಗಿಮಠ ಅವರಿಗೆ ಅದೃಷ್ಟ ಒಲಿಯುತ್ತಾ ಎನ್ನುವುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.