ಬೆಳಗಾವಿಯ ವ್ಯಾಕ್ಸಿನ್ ಡಿಪೋದಿಂದ ಆಗಲಿದೆ 8 ಜಿಲ್ಲೆಗಳಿಗೆ ಕೊರೊನಾ ಲಸಿಕೆ ಪೂರೈಕೆ

ಬೆಳಗಾವಿ: ಜಿಲ್ಲೆ ಸೇರಿದಂತೆ ಸುತ್ತಲಿನ 8 ಜಿಲ್ಲೆಗಳಲ್ಲಿನ ಕೊರೊನಾ ವಾರಿಯರ್ಸ್ ಗಳಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ವ್ಯಾಕ್ಸಿನ್ ಡೆಪೋದಲ್ಲಿ 8 ಲಕ್ಷ ಡೋಸ್ ಗಳನ್ನು ಕನಿಷ್ಠ ತಾಪಮಾನದಲ್ಲಿ ಸಂಗ್ರಹಿಸಿ ಇಡಲು ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಲಸಿಕೆ ಬರಲಿದೆ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಲಸಿಕೆಯನ್ನು ಕನಿಷ್ಠ ತಾಪಮಾಣದಲ್ಲಿ ಸಂಗ್ರಹಿಸಿಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಸೂಚನೆಯಂತೆ ಬೆಳಗಾವಿಯಲ್ಲಿನ ವ್ಯಾಕ್ಸಿನ್ ಡೆಪೋದಲ್ಲಿ 16,700 ಲೀಟರ್ ಲಸಿಕೆಯನ್ನು ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಡೋಸ್ ೫ ಮಿ.ಲೀ. ನಂತಾದರೆ ಒಟ್ಟು 32 ಲಕ್ಷ ಲಸಿಕೆಗಳನ್ನು ಇಲ್ಲಿ ಸ್ಟೋರ್ ಮಾಡಬಹುದು.

ಬೆಳಗಾವಿಯಿಂದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ, ಕಾರವಾರ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಲಸಿಕೆಯ ಪೂರೈಕೆ ಆಗಲಿದೆ. ಈಗಾಗಲೇ 12 ಲಕ್ಷ ಡೋಸ್ ಗಳಷ್ಟು ಲಸಿಕೆಯ ಸಂಗ್ರಹ ವ್ಯಾಕ್ಸಿನ್ ಡೆಪೋದಲ್ಲಿ ಇದ್ದು, ಇನ್ನೂ 20 ಲಕ್ಷ ಡೋಸ್ ನಷ್ಟು ಲಸಿಕೆ ಬರಬೇಕಾಗಿದೆ. ಯಾವ ಕ್ಷಣದಲ್ಲಿಯಾದರೂ ಲಸಿಕೆ ಬರುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ 30 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು. ಈಗಾಗಲೇ ಆರೋಗ್ಯ ಕಾರ್ಯಕರ್ತರ ನೋಂದಣಿ ಆರಂಭಗೊಂಡಿದೆ. ಮೊದಲು 100ಕ್ಕೂ ಹೆಚ್ಚು ಸಿಬ್ಬಂದಿ ಇರುವ ಸುಮಾರು 200 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 20 ಖಾಸಗಿ ಆಸ್ಪತ್ರೆಗಳಾಗಿವೆ. ಮುಂದಿನ ಹಂತದಲ್ಲಿ ಪೊಲೀಸರು ಮತ್ತು ಪೌರಕಾರ್ಮಿಕರಿಗೆ ಲಸಿಕೆ ನೀಡಲಾಗುವುದು. ಬಳಿಕ ವಯಸ್ಸಾದವರು ಮತ್ತು ದೀರ್ಘಕಾಲಿನಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You cannot copy content of this page