ಸುಗ್ರೀವಾಜ್ಞೆ ಮೂಲಕ‌ ಸರ್ಕಾರವು ತರಾತುರಿ‌ ತರಲು‌ ಹೊರಟಿರುವ ಎಲ್ಲ‌ ಕಾಯ್ದೆಗಳನ್ನು‌ ವಿರೋಧಿಸಲು‌ ಕಾಂಗ್ರೆಸ್ ‌ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಭೂಸುಧಾರಣಾ, ಎಪಿಎಂಸಿ, ಕೈಗಾರಿಕಾ ಸುಧಾರಣಾ (ತಿದ್ದುಪಡಿ)  ಕಾಯ್ದೆಗಳನ್ನು ಹಿಂಪಡೆಯಲು ಪಟ್ಟು ಹಿಡಿಯಲು ಕಾಂಗ್ರೆಸ್ ಶಾಸಕಾಂಗ  ಸಭೆಯಲ್ಲಿ  ನಿರ್ಧರಿಸಲಾಗಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ  ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಖಾಸಗಿ ಹೊಟೇಲ್ ನಲ್ಲಿ  ನಡೆದ ಕಾಂಗ್ರೆಸ್ ಶಾಸಕಾಂಗ  ಸಭೆಯಲ್ಲಿ  ಅಧಿವೇಶನದಲ್ಲಿ ಚರ್ಚಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು.

ಸಿದ್ದರಾಮಯ್ಯನವರು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ , ಪಂಚಾಯತ್ ಕಾಯ್ದೆ ತಿದ್ದುಪಡಿಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.


ಸರ್ಕಾರ ತಿದ್ದುಪಡಿಗಳ ಮೂಲಕ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರೈತರ,ಬಡವರ, ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಿದೆ. ಕೊರೊನಾ ಸಂಕಷ್ಟದಿಂದ ಜರ್ಝರಿತವಾಗಿರುವ ಜನರಿಗೆ ಕಾಯ್ದೆಗಳ ಮೂಲಕ ಮತ್ತಷ್ಟು ತೊಂದರೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವ ರಾಜ್ಯಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮುಂದುವರೆಸಿದೆ. ವಿಧಾನಸಭೆಯಲ್ಲಿ ಸಂಖ್ಯಾಬಲ ಇದೆ ಎಂಬ ಕಾರಣಕ್ಕಾಗಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡುವಳಿಕೆ.

ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಹಾನಿ ಮಾಡುವ ಕಾಯ್ದೆಗಳು ಜಾರಿಯಾಗಲು ಬಿಡಬಾರದು ಎಂದು ಸಿದ್ದರಾಮಯ್ಯ ಕರೆ ನೀಡಿದರು. ಕೊರೊನಾದಿಂದ ಜನಜೀವನ ತತ್ತರಿಸಿಹೋಗಿದೆ. ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ನಷ್ಟವಾಗಿದೆ.


ಅವುಗಳ ಬಗ್ಗೆ ಗಮನಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಡ್ರಗ್ಸ್ ಹಾವಳಿಯಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ರಾಜ್ಯ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳುವ ಬದಲು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಾ ಜನರ ದಾರಿತಪ್ಪಿಸುತ್ತಿದೆ.


ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣದಲ್ಲೂ ಇದೇ ರೀತಿ ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಸರ್ಕಾರದ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡಬೇಕೆಂದು ನಾಯಕರು ಸಲಹೆ ನೀಡಿದರು. ಪ್ರತಿಯೊಂದು ವಿಷಯದ ಮೇಲೂ ಆಯ್ದ ವ್ಯಕ್ತಿಗಳು ಚರ್ಚೆ ಮಾಡಬೇಕು.


ಎಲ್ಲರೂ ಎಲ್ಲ ವಿಷಯಗಳ ಮೇಲೆ ಚರ್ಚೆ ಮಾಡಲು ಹೋಗಿ ಗೊಂದಲ ಉಂಟಾಗಬಾರದು. ವಿಷಯ ಚರ್ಚೆ ಮಾಡುವ ಮೊದಲು ಸಾಕಷ್ಟು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಸಮಗ್ರ ಮಾಹಿತಿಯೊಂದಿಗೆ ಸರ್ಕಾರದ ಲೋಪದೋಷಗಳನ್ನು ಬಿಚ್ಚಿಡಬೇಕು ಎಂದರು.

 ಮಾಜಿ ಡಿಸಿಎಂ ಪರಮೇಶ್ವರ್, ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಈಶ್ವರ ಖಂಡ್ರೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page