ಪಾಲಿಕೆ ಚುನಾವಣೆಯಲ್ಲಿ ಸೋತರೂ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡ ಕಾಂಗ್ರೆಸ್, ಶಕ್ತಿ ಇದ್ದಷ್ಟು ಓಟು ಬಂದಿದೆ, ಪಕ್ಷಕ್ಕೆ ನಷ್ಟವೇನೂ ಆಗಿಲ್ಲ ಎಂದ ಸತೀಶ ಜಾರಕಿಹೊಳಿ

ಪಾಲಿಕೆ ಚುನಾವಣೆಯಲ್ಲಿ ಸೋತರೂ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡ ಕಾಂಗ್ರೆಸ್, ಶಕ್ತಿ ಇದ್ದಷ್ಟು ಓಟು ಬಂದಿದೆ, ಪಕ್ಷಕ್ಕೆ ನಷ್ಟವೇನೂ ಆಗಿಲ್ಲ ಎಂದ ಸತೀಶ ಜಾರಕಿಹೊಳಿ

 

 

 

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಕಾಂಗ್ರೆಸ್ ಪಕ್ಷ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದೆ. “ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳು ಕಡಿಮೆಯಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿದ್ದಷ್ಟೇ ಓಟುಗಳು ಈಗಲೂ ಬಿದ್ದಿವೆ. ಹೀಗಾಗಿ ಪಕ್ಷಕ್ಕೆ ನಷ್ಟವೇನೂ ಆಗಿಲ್ಲ. ಆದರೆ, ಎಂಇಎಸ್ ನಲ್ಲಿನ ಗೊಂದಲದ ಕಾರಣ ಅದು ಬಿಜೆಪಿಗೆ ಲಾಭವಾಗಿದೆ. ಇದರಲ್ಲಿ ಬಿಜೆಪಿ ಶಕ್ತಿ ಅಥವಾ ಮೋದಿ ಮ್ಯಾಜಿಕ್ ಏನೂ ಇಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಗೊಳಿ ತಮ್ಮ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.

 

 

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಗರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಎಷ್ಟಿದೆಯೋ ಅಷ್ಟು ಓಟುಗಳು ಬಂದಿವೆ” ಎಂದರು. ಮುಂದುವರಿದು ಮಾತನಾಡಿದ ಅವರು “ಪಕ್ಷದಲ್ಲಿನ ನಾಯಕರ ಹೊಂದಾಣಿಕೆ ಕೊರತೆಯಿಂದ ನಾವು ದಕ್ಷಿಣ ಭಾಗದಲ್ಲಿ ಐದು ಮತ್ತು ಉತ್ತರ ಭಾಗದಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡೆವು” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಆದರೆ ಯಾವ ನಾಯಕರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನುವುದನ್ನು ಅವರು ಹೇಳಲಿಲ್ಲ. “ಪಾಲಿಕೆಯಲ್ಲಿ ಕಡಿಮೆ ಸ್ಥಾನ ಬರುವಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಾತ್ರ ಏನೂ ಇಲ್ಲ. ಅವರ ಕ್ಷೇತ್ರ ನಗರದಲ್ಲಿ ಸೀಮಿತವಾಗಿರುವುದರಿಂದ ಅವರನ್ನು ಹೊಣೆ ಮಾಡಲು ಬರುವುದಿಲ್ಲ” ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

 

 

“ಚುನಾವಣೆಯಲ್ಲಿ ನಾವು ಹತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಇದು ನಿರೀಕ್ಷೆಗಿಂತ ಅತಿಯಾದ ಕಡಿಮೆ ಸಂಖ್ಯೆ ಏನೂ ಅಲ್ಲ. ಜೊತೆಗೆ ಐವರು ಪಕ್ಷೇತರರು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ” ಎಂದು ಸತೀಶ ಜಾರಕಿಹೊಳಿ ತಿಳಿಸಿದರು. “ಎಂಇಎಸ್ ನಲ್ಲಿದ್ದ ಗೊಂದಲದ ಕಾರಣ ಮತಗಳು ಬಿಜೆಪಿ ಕಡೆಗೆ ವಾಲಿದವು. ಇದರಿಂದ ಬಿಜೆಪಿಗೆ ಅನಿರೀಕ್ಷಿತ ರಾಜಕೀಯ ಲಾಭ ಆಯಿತು. ಇದನ್ನೇ ಅವರು ತಮ್ಮ ಶಕ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲಿ ಸತ್ಯಾಂಶ ಇಲ್ಲ” ಎಂದು ಅವರು ಹೇಳಿದ ಸತೀಶ ಜಾರಕಿಹೊಳಿ, ಇರುವ ಕಾರ್ಯಕರ್ತರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ನಗರದಲ್ಲಿ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುತ್ತೇವೆ” ಎಂದರು.