ಬೆಳಗಾವಿಗೆ ತೆರಳಿ ಪ್ರವಾಹ ಸ್ಥಿತಿ ಗಮನಿಸುವಂತೆ ಸಚಿವ ರಮೇಶ ಜಾರಕಿಹೊಳಿಗೆ ಸಿಎಂ ಯಡಿಯೂರಪ್ಪ ಸೂಚನೆ

ಬೆಳಗಾವಿ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಮುಖ ನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಮಲಪ್ರಭಾ ಮತ್ತು ಇತರೆ ಉಪನದಿಗಳು ತುಂಬಿ ಹರಿಯುತ್ತಿವೆ. ಹಲವಾರು ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ.

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕರೆ ಮಾಡಿ ತಕ್ಷಣ ಬೆಳಗಾವಿಗೆ ತೆರಳಿ ಜನರ ಕಷ್ಟಗಳನ್ನು ಆಲಿಸಬೇಕೆಂದು ಸೂಚನೆ ನೀಡಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿರುವ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರ ಪರವಾಗಿ ಪಕ್ಷದ ಹೈಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ರಮೇಶ ಜಾರಕಿಹೊಳಿ ಆಗಷ್ಟ 2 ರಂದು ದೆಹಲಿಗೆ ತೆರಳಿದ್ದರು. ಎರಡ್ಮೂರು ದಿನ ಅಲ್ಲೇ ಇದ್ದರೂ, ಕೊರೊನಾ ಹಿನ್ನೆಲೆಯಲ್ಲಿ ಯಾವ ಹಿರಿಯ ನಾಯಕರೂ ಭೇಟಿಯಾಗದ ಹಿನ್ನೆಲೆಯಲ್ಲಿ ನಿರಾಶೆಯಾಗಿ ಬೆಂಗಳೂರಿಗೆ ಮರಳಿದ್ದರು. ಬಳಿಕ ಇತ್ತೀಚಿಗಷ್ಟೇ ಬೆಂಗಳೂರಿನ ಸದಾಶಿವ ನಗರದಲ್ಲಿ ಖರೀದಿಸಿದ ಮನೆಯಲ್ಲಿ ಇರುತ್ತಿದ್ದರು.

ಇಂದು ಮುಂಜಾನೆ ಸಿಎಂ ಯಡಿಯೂರಪ್ಪ ಬೆಳಗಾವಿಗೆ ತೆರಳಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಇಂದು ಸಂಜೆಯ ಹೊತ್ತಿಗೆ ಸಚಿವ ರಮೇಶ ಜಾರಕಿಹೊಳಿ ಜಿಲ್ಲೆಗೆ ಮರಳುವ ಸಾಧ್ಯತೆ ಇದೆ. ಇದಕ್ಕೂ ಮುಂಚೆ ಅವರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಕರೆ ಮಾಡಿ ಪ್ರವಾಹ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page