
10 ಭಾರತೀಯ ಯೋಧರನ್ನು ಬಿಡುಗಡೆ ಮಾಡಿದ ಚೀನಾ
ನವದೆಹಲಿ: ಗಾಲ್ವನ್ ವ್ಯಾಲಿಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಸೈನಿಕರು ಕಾಣೆಯಾಗಿಲ್ಲ ಎಂದು ಭಾರತೀಯ ಸೇನೆ ಹೇಳಿತ್ತು. ಆದರೆ ಈ ಸಂಘರ್ಷಣೆಯಲ್ಲಿ 10 ಭಾರತೀಯ ಯೋಧರನ್ನ ಚೀನಾ ವಶಕ್ಕೆ ತೆಗೆದುಕೊಂಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಇದೀಗ ಚೀನಾ 10 ಭಾರತೀಯ ಯೋಧರು ಸೇರಿದಂತೆ ಇಬ್ಬರು ಸೇನಾಧಿಕಾರಿಗಳನ್ನು ಬಿಡುಗಡೆ ಮಾಡಿದೆ. ನಿನ್ನೆ ಭಾರತೀಯ ಸೇನೆಯ ಮುಖ್ಯ ಅಧಿಕಾರಿಗಳು ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಸೇನೆಯ ಮುಖ್ಯಸ್ಥರು ಗಡಿ ವಿಚಾರ ಸಂಬಂಧ ಮಾತುಕತೆ ನಡೆಸಿದ್ದರು. ಸೈನ್ಯದ ನಿಷ್ಕ್ರಿಯತೆ, ಗಾಲ್ವನ್ ವ್ಯಾಲಿಯನ್ನು ಮರುಸ್ಥಿತಿಗೆ ತರುವ ಬಗ್ಗೆ ಚರ್ಚೆ ನಡೆಸಿದೆ. ಇದೇ ವೇಳೆ ಚೀನಾ ಸೇನೆ ಬಂಧಿಸಿರುವ ಭಾರತೀಯ ಯೋಧರನ್ನ ಬಿಡುಗಡೆ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ನಿನ್ನೆಯೇ ಚೀನಾ ಸೇನೆ ಬಂಧಿಸಿದ್ದ 10 ಮಂದಿ ಯೋಧರನ್ನ ಬಿಡುಗಡೆ ಮಾಡಿದೆ.
ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ 76 ಭಾರತೀಯ ಸೇನಾ ಸಿಬ್ಬಂದಿ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದು, ಅವರಲ್ಲಿ 18 ಮಂದಿಗೆ ಗಂಭೀರ ಗಾಯಗಳಾಗಿವೆ. 58 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ ಯೋಧರನ್ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 20 ಸೈನಿಕರು ಹುತಾತ್ಮರಾಗಿದ್ದಾರೆ.