
ಸೈನಿಕರ ಸಾವಿನ ಕುರಿತಂತೆ ಮೌನ ಮುರಿದ ಚೀನಾ
ಬೀಜಿಂಗ್: ಪೂರ್ವ ಲಡಾಖ್ನ ಗಲ್ವಾನ್ ಕಣಿವೆ ಬಳಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಸೇನೆಯ ಸೈನಿಕರು ಜೀವ ಕಳೆದುಕೊಂಡಿರುವುದು ಈಗ ಖಚಿತವಾಗಿದ್ದು, ಮೊದಲ ಬಾರಿಗೆ ಚೀನಾ ಮೃತಪಟ್ಟಿರುವ ಸೈನಿಕರ ಬಗೆಗಿನ ಮೌನ ಮುರಿದಿದೆ.
“ನಮ್ಮಲ್ಲಿ 20ಕ್ಕಿಂತ ಕಡಿಮೆ ಸೈನಿಕರು ಭಾರತೀಯ ಯೋಧರ ದಾಳಿಗೆ ಬಲಿಯಾಗಿದ್ದಾರೆ ಎಂದು ಚೀನಾ ಒಪ್ಪಿಕೊಂಡಿದೆ. ಅಲ್ಲೂ ಕೂಡ ನಿಖರ ಸಂಖ್ಯೆಯನ್ನು ಮರೆಮಾಚಿದೆ. ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖವಾಣಿ ಆಗಿರುವ ಗ್ಲೋಬಲ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ.
‘ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುವುದರಿಂದ ಗಡಿಯಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ದೇಶದ ಒಳಗಿನ ಪರಿಸ್ಥಿತಿಯೂ ಕೈ ಮೀರಬಹುದು. ಹಾಗಾಗಿ ಎಷ್ಟು ಸೈನಿಕರು ಸತ್ತಿದ್ದಾರೆ ಎಂಬುದನ್ನು ಹೇಳುವುದಿಲ್ಲ’ ಎಂದು ಚೀನಾ ತಜ್ಞರು ಹೇಳಿದ್ದಾಗಿ ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ. ಚೀನಾ ಸೈನಿಕರ ನಿಖರ ಸಂಖ್ಯೆಯನ್ನು ಹೇಳಿದರೆ ಭಾರತದ ಸರ್ಕಾರದ ಮೇಲಿನ ಒತ್ತಡವೂ ಹೆಚ್ಚಾಗಬಹುದು. ಹಾಗಾಗಿ 20ಕ್ಕಿಂತ ಕಡಿಮೆ ಎಂದಷ್ಟೇ ಹೇಳಿದೆ ಎಂದು ತಿಳಿಸಿದೆ.
ಸಂಘರ್ಷದ ಬೆನ್ನಲ್ಲೇ ಭಾರತದಲ್ಲಿ ಕೆಲವು ಪ್ರಮುಖರು ತಪ್ಪುತಪ್ಪಾಗಿ, ಊಹಾಪೋಹದ ಸಾವಿನ ಸಂಖ್ಯೆಯನ್ನು ಹೇಳಿದ್ದಾರೆ. ತಮ್ಮ ದೇಶದವರನ್ನು ಸಮಾಧಾನ ಮಾಡುವುದಕ್ಕೋಸ್ಕರ ಭಾರತದ ಯೋಧರಿಗಿಂತ, ಚೀನಾದ ಸೈನಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದಾರೆ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ. ಇದು ಖಂಡನೀಯ ಎಂದು ಚೀನಾದ ವಿಮರ್ಶಕರು, ತಜ್ಞರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾಗಿ ಗ್ಲೋಬಲ್ ಟೈಮ್ಸ್ ತಿಳಿಸಿದೆ.
ಸಂಘರ್ಷದ ಮರುದಿನವೇ ಭಾರತ ತನ್ನ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾ ಮಾತ್ರ ಒಂದು ವಾರ ಆದರೂ ಮೃತರ ಸಂಖ್ಯೆಯನ್ನು ಹೇಳಿರಲಿಲ್ಲ. ಈ ಮಧ್ಯೆ ಊಹಾಪೋಹಗಳೂ ಎದ್ದಿದ್ದವು. ಚೀನಾದ 43 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಅದಾದ ನಂತರ ಚೀನಾದ 16 ಸೈನಿಕರ ಮೃತದೇಹಗಳನ್ನು ಭಾರತೀಯ ಸೇನೆ ಹಸ್ತಾಂತರ ಮಾಡಿದೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಮಾಧ್ಯಮಗಳು ಚೀನಾದ 35 ಸೈನಿಕರು ಹತ್ಯೆಗೀಡಾಗಿದ್ದಾರೆ ಎಂದು ವರದಿ ಮಾಡಿದ್ದವು.