ಶನಿವಾರ, ಭಾನುವಾರ ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ

ಶನಿವಾರ, ಭಾನುವಾರ ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮತ್ತು ಭಾನುವಾರ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಬೆಳಗಾವಿ ಸೇರಿದಂತೆ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಶನಿವಾರ ರಾತ್ರಿ 7.30 ಕ್ಕೆ ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಲಿರುವ ಅವರು, ಅಲ್ಲಿಯ ಪುರಸಭೆ ಆಡಳಿತ ಕಚೇರಿ ಉದ್ಘಾಟನೆ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 8.30 ಕ್ಕೆ ಹುಕ್ಕೇರಿ ಪಟ್ಟಣಕ್ಕೆ ಭೇಟಿ ಕೊಟ್ಟು ನೂತನವಾಗಿ ನಿರ್ಮಿಸಿರುವ ಬಸ್ ಘಟಕದ ಉದ್ಘಾಟನೆ ಹಾಗೂ ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸುವರು. ಬಳಿಕ ಹುಕ್ಕೇರಿ ಡಿಪ್ಲೋಮಾ ಕೃಷಿ ಕಾಲೇಜು ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು.

ಭಾನುವಾರ ಬೆಳಗಾವಿ ನಗರದ ಶಹಾಪುರ ನಗರದಲ್ಲಿನ ಶಿವಾಜಿ ಉದ್ಯಾನ ಬಳಿ ದೇಶಪ್ರೇಮಿ ವೀರ ದಿ.ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ಮುಂಜಾನೆ 9.15ಕ್ಕೆ ಉದ್ಘಾಟಿಸುವರು. 9.30 ಕ್ಕೆ ಮಹಾವೀರ ಭವನದಲ್ಲಿ ನೂತನವಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ ಬಿಜೆಪಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ 10.15 ಕ್ಕೆ ಟಿಳಕವಾಡಿಯಲ್ಲಿ ವಿಶೇಷವಾಗಿ ವಿಕಲಚೇತನ ಮಕ್ಕಳಿಗಾಗಿ ವಿನೂತನ ಮಾದರಿಯಲ್ಲಿ ನಿರ್ಮಿಸಲಾಗಿರುವ ಮಹಾತ್ಮಾ ಫುಲೆ ಉದ್ಯಾನ ಉದ್ಘಾಟಿಸುವರು. 

11 ಗಂಟೆಗೆ ಸುರೇಶ ಅಂಗಡಿ ಏಜ್ಯುಕೇಶನ್ ಫೌಂಡೇಶನ್ ವತಿಯಿಂದ ಸಾವಗಾಂವ ರಸ್ತೆಯಲ್ಲಿನ ಕಾಲೇಜಿನಲ್ಲಿ ಆಯೋಜಿಸಿರುವ ದಿ.ಸುರೇಶ ಅಂಗಡಿ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ 2 ಗಂಟೆಗೆ ರಸ್ತೆ ಮಾರ್ಗವಾಗಿ ಗದಗ ಜಿಲ್ಲೆಗೆ ತೆರಳುವರು.