
ಕೆಂಪು ಇರುವೆಗಳ ಚಟ್ನಿ ಕೊರೊನಾಗೆ ರಾಮಬಾಣ? ಆಯುಷ್ ಇಲಾಖೆಯಿಂದ ಮಾನ್ಯತೆಯ ಸಾಧ್ಯತೆ
ನವದೆಹಲಿ: ಕೊರೊನಾ ಶಮನಕ್ಕೆ ಲಸಿಕೆ ಕಂಡು ಹಿಡಿಯಲು ಜಗತ್ತಿನ ಫಾರ್ಮಾ ಕಂಪನಿಗಳು ಪೈಪೋಟಿಗೆ ಇಳಿದಿವೆ. ಈ ನಡುವೆ ಓರಿಸ್ಸಾ ಮತ್ತು ಛತ್ತೀಸಗಡದಲ್ಲಿನ ಆದಿವಾಸಿಗಳು ಬಳಸುವ ಕೆಂಪು ಇರುವೆಗಳ ಚಟ್ನಿ ಕೊರೊನಾಗೆ ರಾಮಬಾಣ ಎಂಬ ಅಂಶ ಬೆಳಕಿಗೆ ಬಂದಿದೆ. ಕೆಂಪು ಇರುವೆಗಳ ಚಟ್ನಿಗೆ ಆಯುಷ್ ಇಲಾಖೆ ಕೂಡ ಮಾನ್ಯತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಓರಿಸ್ಸಾ, ಛತ್ತಿಸಗಡ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಆದಿವಾಸಿಗಳು ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಅಶಕ್ತಿ ಇತ್ಯಾದಿ ರೋಗಗಳಿಂದ ಮುಕ್ತಿ ಪಡೆಯಲು ಕೆಂಪು ಇರುವೆಗಳು ಮತ್ತು ಹಸಿ ಮೆಣಸಿನ ಚಟ್ನಿ ತಿನ್ನುತ್ತಾರೆ. ಇದೇ ಕಾರಣದಿಂದ ಆದಿವಾಸಿಗಳು ಇರುವ ಪ್ರದೇಶಗಳಲ್ಲಿ ಕೊರೊನಾ ಪ್ರಭಾವ ಬೀರಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಇದೇ ಚಟ್ನಿಯನ್ನು ಕೊರೊನಾ ಉಪಚಾರದ ಔಷಧವಾಗಿ ಬಳಸಲು ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಸರ್ಕಾರದ ವತಿಯಿಂದ ಬೇಡಿಕೆಗೆ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಓರಿಸ್ಸಾ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿದೆ.
ಬೇಡಿಕೆ ಕುರಿತಾದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಕೆಂಪು ಇರುವೆಗಳ ಚಟ್ನಿಯನ್ನು ಕೊರೊನಾಗೆ ಬಳಸಲು ಮಾನ್ಯತೆ ನೀಡುವುದಕ್ಕೆ ಸಂಬಂಧಪಟ್ಟಂತೆ ಮೂರು ತಿಂಗಳಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಆಯುಷ್ ಇಲಾಖೆ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ವತಿಯಿಂದ ಕೆಂಪು ಇರುವೆಗಳ ಚಟ್ನಿಗೆ ಮಾನ್ಯತೆ ನೀಡುವ ಕುರಿತಂತೆ ಪ್ರಕ್ರಿಯೆಗಳು ಆರಂಭವಾಗಿವೆ.
ಅರ್ಜಿದಾರರ ಪ್ರಕಾರ ಕೆಂಪು ಇರುವೆಗಳಲ್ಲಿ ಫಾರ್ಮಿಕ್ ಆಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಝಿಂಕ್ ಮತ್ತು ಲೋಹದ ಅಂಶಗಳು ಹೇರಳ ಪ್ರಮಾಣದಲ್ಲಿ ಇರುತ್ತವೆ. ಹೀಗಾಗಿ ಆದಿವಾಸಿಗಳು ರೋಗ ಬಂದಾಗ ಅಥವಾ ರೋಗಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಂಪು ಇರುವೆಗಳನ್ನು ತಿನ್ನುತ್ತಾರೆ.