ಬೆಳಗಾವಿಯಲ್ಲಿನ ಕೇಂದ್ರ ವಾಣಿಜ್ಯ ಮತ್ತು ಅಬಕಾರಿ ಆಯುಕ್ತಾಲಯದ ಕ್ಷಿಪ್ರ ಕಾರ್ಯಾಚರಣೆ: ಅನಧಿಕೃತವಾಗಿ ಸಾಗಿಸುತ್ತಿದ್ದ ರೂ.7 ಕೋಟಿ ಮೌಲ್ಯದ ಅಡಿಕೆ ಜಪ್ತಿ

ಬೆಳಗಾವಿಯಲ್ಲಿನ ಕೇಂದ್ರ ವಾಣಿಜ್ಯ ಮತ್ತು ಅಬಕಾರಿ ಆಯುಕ್ತಾಲಯದ ಕ್ಷಿಪ್ರ ಕಾರ್ಯಾಚರಣೆ: ಅನಧಿಕೃತವಾಗಿ ಸಾಗಿಸುತ್ತಿದ್ದ ರೂ.7 ಕೋಟಿ ಮೌಲ್ಯದ ಅಡಿಕೆ ಜಪ್ತಿ

 

ಬೆಳಗಾವಿ: ಮಂಗಳೂರು ವಲಯದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಬೆಳಗಾವಿಯ ಕೇಂದ್ರ ವಾಣಿಜ್ಯ ಮತ್ತು ಅಬಕಾರಿ ಆಯುಕ್ತಾಲಯದ ಅಧಿಕಾರಿಗಳು ಅನಧಿಕೃತವಾಗಿ ದೆಹಲಿ ಮತ್ತು ಅಹಮದಾಬಾದ್ ಗೆ ಸಾಗಿಸಲಾಗುತ್ತಿದ್ದ ಏಳು ಲಾರಿ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ.

 

 

ಸರ್ಕಾರ ಅಡಿಕೆ ಮಾರಾಟದ ಮೇಲೆ ಶೇ.5 ರಷ್ಟು ಜಿಎಸ್ಟಿ ವಿಧಿಸಿದೆ. ಹುಬ್ಬಳ್ಳಿ – ಅಂಕೋಲಾ ಮಾರ್ಗಮಧ್ಯೆ ಅಧಿಕಾರಿಗಳು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಲಾಗಿ, ಅಡಿಕೆಯನ್ನು ಜಿಎಸ್ಟಿ ಭರಿಸದೆ ಅನಧಿಕೃತವಾಗಿ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಸಾಗಿಸಲಾಗುತ್ತಿದ್ದ ಅಡಿಕೆಯ ಒಟ್ಟು ಮೊತ್ತ ಅಂದಾಜು ರೂ.7 ಕೋಟಿ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ಶಿವಮೊಗ್ಗ ಜಿಲ್ಲೆಯಿಂದ ಅಡಿಕೆ ತುಂಬಿಸಿಕೊಂಡು ಈ ಏಳು ಲಾರಿಗಳು ದೆಹಲಿ ಮತ್ತು ಅಹಮದಾಬಾದ್ ಗೆ ತೆರಳುತ್ತಿದ್ದವು. ಲಾರಿಗಳ ಸಮೇತ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.  ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತದೆ.