ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿ ಸಭೆ ನಂತರ ಸಂಪುಟ ವಿಸ್ತರಣೆ?

ಬೆಂಗಳೂರುತೀವ್ರ ಕುತೂಹಲ ಮೂಡಿಸಿರುವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವುದನ್ನು ಹೈಕಮಾಂಡ್ ಇನ್ನೂ ಯಾವುದೇ ಸ್ಪಷ್ಟತೆ ತಿಳಿಸಿಲ್ಲ. ಇದರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್‌ ಆದೇಶಕ್ಕಾಗಿ ಕಾದು ಕುಳಿತ್ತಿದ್ದಾರೆ.

ಈಗಾಗಲೇ ಈ ಸಂಬಂಧ ದೆಹಲಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಬಂದಿದ್ದು, ಇನ್ನೆರೆಡು ದಿನಗಳಲ್ಲಿ ತಿಳಿಸುವುದಾಗಿ ಹೇಳಿ ಕಳುಹಿಸಿದ್ದರು. ಆದರೆ 15 ದಿನಗಳಾದರೂ ಹೈಕಮಾಂಡ್ ಏನೂ ಹೇಳದಿರುವುದು ಯಡಿಯೂರಪ್ಪ ಹಾಗೂ ಸಚಿವಾಕಾಂಕ್ಷಿಗಳ ಕಣ್ಣು ಕೆಂಪಾಗಿಸಿದೆ. ಇನ್ನೂ ಎರಡು ದಿನಗಳಲ್ಲಿ ಕಾಯಿರಿ ಎಂದು ಹೇಳುವ ಮೂಲಕ ಯಡಿಯೂರಪ್ಪಗೆ ಹೈಕಮಾಂಡ್‌ ಮತ್ತೊಂದು ಶಾಕ್ ಕೊಟ್ಟಿದೆ.

ಕಾರ್ಯಕಾರಿಣಿ ಬಳಿಕ ಸಂಪುಟ ವಿಸ್ತರಣೆ?

ಇದೇ ಡಿ. 4 ಮತ್ತು 5ರಂದು ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿವರೆಗೂ ಸಂಪುಟ ವಿಸ್ತರಣೆ ಡೌಟ್ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಉತ್ತರಪ್ರದೇಶ ಸಂಸದ ಅರುಣ್ ಸಿಂಗ್ ನೇಮಕಗೊಂಡಿದ್ದು, ರಾಜ್ಯ ಕಾರ್ಯಕಾರಿಣಿ ಮೂಲಕ ರಾಜ್ಯ ಬಿಜೆಪಿ ಉಸ್ತುವಾರಿ ಜವಾಬ್ದಾರಿಯನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ.

ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ಬಸವ ಕಲ್ಯಾಣ, ಮಸ್ಕಿ ಅಭ್ಯರ್ಥಿಗಳ ಆಯ್ಕೆ, ಉಪ ಚುನಾವಣಾ ಸಿದ್ಧತೆ, ಸದ್ಯದಲ್ಲೇ ಎದುರಾಗಲಿರುವ ಗ್ರಾಮ ಪಂಚಾಯತ್ ಚುನಾವಣೆ ಕುರಿತು ಈ ಬಾರಿಯ ಕಾರ್ಯಕಾರಿಣಿ ಸಭೆ ವೇಳೆ ಚರ್ಚಿಸಲಾಗುತ್ತದೆ.

ಕಾರ್ಯಕಾರಣಿ ಸಭೆ ಜೊತೆಯಲ್ಲೇ ಪಕ್ಷದ ವಿಶೇಷ ಸಭೆ ಮತ್ತು ಕೋರ್ ಕಮಿಟಿ ಸಭೆಯನ್ನು ನಡೆಸಲಾಗುತ್ತದೆ. ಈ ವೇಳೆ ಸಂಪುಟ ವಿಸ್ತರಣೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ ಮೇಲೆ ರಾಜ್ಯ ಮುಖಂಡರು ಹಾಗೂ ಬಿಎಸ್ ವೈ ಜೊತೆ ಚರ್ಚೆ ನಡೆಸಿದ ಬಳಿಕ ಸಂಪುಟ ವಿಸ್ತರಣೆಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಬೆಳಗಾವಿ ಕಾರ್ಯಕಾರಿಣಿ ಮುಗಿದ ಬಳಿಕ ಬೆಂಗಳೂರಲ್ಲಿ ಸಿಎಂ ಬಿಎಸ್ ವೈ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಬಳಿಕವೇ ಸಂಪುಟ ವಿಸ್ತರಣೆ ಅನ್ನುತ್ತಿವೆ ಬಿಜೆಪಿಯ ಮೂಲಗಳು.

Leave a Reply

Your email address will not be published. Required fields are marked *

You cannot copy content of this page