ಮತ್ತೆ ಬೆಳಗಾವಿ ಮರೆತ ಸರ್ಕಾರ; ಈ ಬಾರಿಯ ಚಳಿಗಾಲ ಅಧಿವೇಶನವೂ ಬೆಂಗಳೂರಿನಲ್ಲಿ; ಸುವರ್ಣಸೌಧಕ್ಕೆ ಮತ್ತೆ ಆವರಿಸಿದ ಅನಾಥಭಾವ


ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನ  ವಿಧಾನಸೌಧದಲ್ಲಿಯೇ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಬೆಳಗಾವಿಯಲ್ಲಿನ‌ ಸುವರ್ಣ ವಿಧಾನಸೌಧ ಮತ್ತೆ ಅನಾಥವಾಗಿದೆ.

ಇಂದು ಮುಂಜಾನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸೆಂಬರ್ 7 ರಿಂದ 15ರ ವರೆಗೆ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸುವ   ನಿರ್ಣಯ ಕೈಗೊಳ್ಳಲಾಗಿದೆ. ಮಹತ್ವದ ಸಚಿವ ಸಂಪುಟ ಸಭೆ ಮಹತ್ವದ ಸಚಿವ ಸಂಪುಟ ಸಭೆ ಕೇವಲ ಹತ್ತೇ ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು ಚಳಿಗಾಲದ ಅಧಿವೇಶನ ಮತ್ತು ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ ನಡೆದಿದೆ.

 ಕಳೆದ ಎರಡು ವರ್ಷದಿಂದ ಸುವರ್ಣ ವಿಧಾನಸೌಧದಲ್ಲಿ  ಅಧಿವೇಶನ ನಡೆದಿಲ್ಲ.  ಪ್ರತಿವರ್ಷ  ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸುವುದು ವಾಡಿಕೆ. ಆದರೆ ಯಡಿಯೂರಪ್ಪ ನೇತೃತ್ವದ  ಸರ್ಕಾರ  ಆ ಸಂಪ್ರದಾಯವನ್ನು ಮುರಿದಿದೆ.

ಕಳೆದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಿದ್ದ ಸರ್ಕಾರ, ಈ ವರ್ಷದ ಅಧಿವೇಶನವನ್ನೂ ಅಲ್ಲಿಯೇ ನಡೆಸಲು ತೀರ್ಮಾನಿಸಿದೆ. ಹೀಗಾಗಿ ಬೆಳಗಾವಿಯಲ್ಲಿ  ನೂರಾರು ಕೋಟಿ ಖರ್ಚು ಮಾಡಿ ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂದಿಸಲು ನಿರ್ಮಿಸಲಾದ  ಸುವರ್ಣಸೌಧ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

 ಸರ್ಕಾರದ ನಿರ್ಧಾರವನ್ನು ಉತ್ತರ ಕರ್ನಾಟಕದ ಶಾಸಕರು ಹಾಗೂ ಜನಪ್ರತಿನಿಧಿಗಳು ವಿರೋಧ ಮಾಡದೆ ಇರುವುದು ಈ ಭಾಗದ ದುರಾದೃಷ್ಟ.

 ಸರ್ಕಾರದ ಇಂತಹ ಕೆಟ್ಟ ನಿರ್ಧಾರಗಳಿಂದ ಸುವರ್ಣಸೌಧದ ಕುರಿತಂತೆ ಜನಮಾನಸದಲ್ಲಿ ಜೋಕುಗಳು ಹರಿದಾಡುತ್ತಿದ್ದು, ಕೆಲವರು ಕಟ್ಟಡವನ್ನು ಬಾಡಿಗೆಗೆ ಕೇಳುವಂತಾಗಿದೆ.

Leave a Reply

Your email address will not be published. Required fields are marked *

You cannot copy content of this page