ಪಾಲಿಕೆ ಚುನಾವಣೆ: ಬಿಜೆಪಿಗೆ ಕಾರ್ಯಕರ್ತರ ಉತ್ಸಾಹವೇ ಶಕ್ತಿಯಾದರೆ ಕಾಂಗ್ರೆಸ್ ಗೆ ತಂತ್ರಗಾರಿಕೆಯೇ ಬಲ, ಎಂಇಎಸ್ ನಲ್ಲಿ ತಳಮಳ

ಪಾಲಿಕೆ ಚುನಾವಣೆ: ಬಿಜೆಪಿಗೆ ಕಾರ್ಯಕರ್ತರ ಉತ್ಸಾಹವೇ ಶಕ್ತಿಯಾದರೆ ಕಾಂಗ್ರೆಸ್ ಗೆ ತಂತ್ರಗಾರಿಕೆಯೇ ಬಲ, ಎಂಇಎಸ್ ನಲ್ಲಿ ತಳಮಳ

 

 

ಬೆಳಗಾವಿ: ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಚಿಹ್ನೆಯ ಮೇಲೆ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಹಿಂದೆಂದೂ ಕಾಣದ ಕಲರವ ನೋಡಲು ಸಿಗುತ್ತಿದೆ. ಬೆಳಗಾವಿಗರ ಮಟ್ಟಿಗೆ ಇದು ಹೊಸದು. ಹಿಂದಿನ ಚುನಾವಣೆಗಳಲ್ಲಿ ಕನ್ನಡ ಮತ್ತು ಮರಾಠಿ ಸಂಘಟನೆಗಳ ಮುಖಂಡರು, ಆ ಸಂಘಟನೆಗಳ ಅಜೆಂಡಾ, ಭಾಷೆ ಮತ್ತು ಸಂಸ್ಕೃತಿ ಉಳಿವಿಗೆ ಸಂಬಂಧಪಟ್ಟ ಭಾವನಾತ್ಮಕ ವಿಷಯಗಳು ಹೆಚ್ಚು ಚರ್ಚೆಯಲ್ಲಿ ಇರುತ್ತಿದ್ದವು. ಈ ಬಾರಿಯ ಚುನಾವಣೆಯಲ್ಲಿ ಭಾಷಾ ಸಂಘಟನೆಗಳ ಅಸ್ತಿತ್ವ ಗೌಣವಾಗಿದ್ದು ರಾಜಕೀಯ ಪಕ್ಷಗಳ ಅಜೆಂಡಾಗಳೇ ಸದ್ದು ಮಾಡುತ್ತಿವೆ.

 

 

ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಪಕ್ಷೇತರರು ಈ ಬಾರಿ ಪಾಲಿಕೆ ಚುನಾವಣಾ ಕಣದಲ್ಲಿ ಧುಮುಕಿದ್ದಾರೆ. ಮೇಲ್ನೋಟಕ್ಕೆ ಉಳಿದವರಿಗಿಂತ ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚು ಉತ್ಸಾಹ ಕಂಡು ಬರುತ್ತಿದೆ. ಪಕ್ಷದ ಮುಖಂಡರು ಈ ಬಾರಿ ಪಾಲಿಕೆಯ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಲೇ ಬೇಕು ಎನ್ನುವ ಛಲದಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪಾಲಿಕೆ ಚುನಾವಣೆಯಾಗಿದ್ದರೂ ಪಕ್ಷದ ಹಿರಿಯ ನಾಯಕರನ್ನು ಪಕ್ಷ ದುಡಿಸಿಕೊಳ್ಳುತ್ತಿದೆ. ಬೆಂಗಳೂರಿನ ಕಾರ್ಪೋರೇಟರ್ ಗಳು ಸೇರಿದಂತೆ, ಶಾಸಕರು, ಸಚಿವರು ಹಾಗೂ ವಿವಿಧ ವರ್ಗಗಳ ನಾಯಕರನ್ನು ತಂದು ಪ್ರಚಾರ ನಡೆಸಲಾಗುತ್ತಿದ್ದು, ಮತದಾರರ ವಿಶ್ವಾಸ ಗಳಿಸಲು ಎಲ್ಲ ಕಸರತ್ತುಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ನಗರದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದುವರೆಗೆ ಆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಪಕ್ಷ ನಡೆಸುತ್ತಿರುವ ಎಲ್ಲ ಕಸರತ್ತುಗಳು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿವೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ ಈ ಬಾರಿ ಪಾರ್ಟಿ ಫಂಡ್ ವಿತರಣೆ ವಿಷಯದಲ್ಲಿಯೂ ಬಿಜೆಪಿ ಹಿಂದೆ ಬಿದ್ದಿಲ್ಲ.

 

 

ಇನ್ನು ಕಾಂಗ್ರೆಸ್ ವಿಷಯಕ್ಕೆ ಬಂದರೆ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿ ಬಿಜೆಪಿಯಷ್ಟು ಪ್ರಚಾರದ ಅಬ್ಬರ ಕಾಣದೇ ಹೋದರೂ ತಂತ್ರಗಾರಿಕೆ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ದೇಶದ ಹಳೆಯ ಪಕ್ಷವಾಗಿರುವುದರಿಂದ ಇಲ್ಲಿಯ ನಾಯಕರಿಗೆ ಜನರ ನಾಡಿಮಿಡಿತದ ಅರಿವು ಚೆನ್ನಾಗಿದೆ. ಹೀಗಾಗಿ ಅಬ್ಬರಕ್ಕೆ ಬೀಳದೆ ಸೈಲೆಂಟ್ ಆಗಿ ಮತದಾರರನ್ನು ಸೆಳೆಯಲು ತಂತ್ರಗಳನ್ನು ರೂಪಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಂಇಎಸ್ ನ ಬಹಳಷ್ಟು ಸಂಖ್ಯೆಯ ನಾಯಕರು ಪಕ್ಷದ ಮುಲಾಜಿಗೆ ಬೀಳದೆ ಜಾರಕಿಹೊಳಿ ಕುಟುಂಬದ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಈ ಬಾರಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸತೀಶ ಜಾರಕಿಹೊಳಿ ಅವರೇ ಈ ಬಾರಿ ಮುಂಚೂಣಿಯಲ್ಲಿ ನಿಂತು ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ ಇದರ ಲಾಭ ನಿಶ್ಚಿತವಾಗಿಯೂ ಪಕ್ಷಕ್ಕೆ ಆಗಲಿದೆ ಎನ್ನಲಾಗುತ್ತಿದೆ. ಪಾಲಿಕೆ ಅಧಿಕಾರ ಹಿಡಿಯಲು ಮರಾಠಿ ಮತ್ತು ಕನ್ನಡ ಭಾಷಿಯಕರಿರುವ ವಾರ್ಡ್ ಗಳಿಂದ 15 ರಿಂದ 20 ಸ್ಥಾನ ಮತ್ತು ಉರ್ದು ಭಾಷಿಕ ವಾರ್ಡ್ ಗಳಿಂದ 10 ರಿಂದ 15 ಸ್ಥಾನ ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡು ತಂತ್ರಗಾರಿಕೆ ಹೆಣೆಯಲಾಗಿದೆ. ಪ್ರತಿ ಬಾರಿಯೂ 10 ರಿಂದ 15 ಉರ್ದು ಭಾಷಿಕ ಕಾರ್ಪೋರೇಟರ್ ಗಳು ಪಾಲಿಕೆಯಲ್ಲಿ ಇರುತ್ತಿದ್ದರು. ಉರ್ದು ಭಾಷಿಕರ ನೆರವಿಲ್ಲದೆ ಪಾಲಿಕೆಯಲ್ಲಿ ಕನ್ನಡ ಭಾಷಿಕ ಮೇಯರ್ ಆಗಲು ಸಾಧ್ಯವಿರಲಿಲ್ಲ. ಕಾಂಗ್ರೆಸ್ ನ ಈ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ತಿಳಿಯಲು ಸಪ್ಟೆಂಬರ್ 6 ರ ವರೆಗೆ ಕಾಯಬೇಕು. ಸತೀಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಿಗೆ ಪಕ್ಷದ ಮತಗಳ ಜೊತೆಗೆ ಸ್ವಲ್ಪ ಮರಾಠಿ ಭಾಷಿಕರ ಮತಗಳೂ ಬರಲಿವೆ ಎನ್ನುವ ಲೆಕ್ಕಾಚಾರ ಇದೆ.

 

 

ಇನ್ನು ಇದುವರೆಗೆ ಪಾಲಿಕೆ ಮೇಲೆ ಬಹುಪಾಲು ಅಧಿಕಾರ ನಡೆಸಿರುವ ಎಂಇಎಸ್ ಈ ಬಾರಿ ಕಂಗಾಲಾಗಿದೆ. ಸಂಘಟನೆಯ ಕೆಲವು ಮುಖಂಡರು ಒಂದು ಹೆಜ್ಜೆಯನ್ನು ಕಾಂಗ್ರೆಸ್ ನಲ್ಲಿ ಇಟ್ಟಿದ್ದರೆ, ಇನ್ನು ಕೆಲವರು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಸ್ಪಷ್ಟವಾಗಿ ಈ ಬಾರಿ ಎಂಇಎಸ್ ಅಭ್ಯರ್ಥಿಗಳು ಯಾರು ಎನ್ನುವುದು ಅದರ ಮುಖಂಡರಿಗೇ ಗೊತ್ತಿಲ್ಲ. ಪ್ರತಿ ಬಾರಿ ಮರಾಠಿ ಭಾಷಿಕರು ಹೆಚ್ಚು ಇರುವ ವಾರ್ಡ್ ಗಳಿಂದ ಗೆದ್ದು ಬರುವ ಅಭ್ಯರ್ಥಿಗಳಿಗೆ ಮಾಲೆ ಹಾಕಿ ಅವರನ್ನು ಎಂಇಎಸ್ ಅಭ್ಯರ್ಥಿ ಎಂದು ಘೋಷಿಸಿ ಗುಲಾಲು ಎರಚುತ್ತಿದ್ದರು. ಮರಾಠಿ ಭಾಷಿಕರ ವಿರೋಧ ಏಕೆ ಕಟ್ಟಿಕೊಳ್ಳಬೇಕು ಎಂದು ಗೆದ್ದ ಅಭ್ಯರ್ಥಿಗಳೂ ಅದಕ್ಕೆ ವಿರೋಧ ವ್ಯಕ್ತಪಡಿಸದೆ ಸುಮ್ಮನಿರುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಏಕೆಂದರೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಜೊತೆ ನೇರವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಪಾಲಿಕೆ ಚುನಾವಣೆ ಎಂಇಎಸ್ ಬುಡಕ್ಕೆ ನೇರವಾಗಿ ಕೊಳ್ಳಿ ಇಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಗೆ ಒಂದು ಸ್ಥಾನವನ್ನು ಗೆಲ್ಲಲೂ ಸಾಧ್ಯವಾಗಿಲ್ಲ. ಪಾಲಿಕೆಯನ್ನೂ ಕಳೆದುಕೊಂಡರೆ ಇದರ ಕಾರ್ಯಕರ್ತರು ಸಹಜವಾಗಿಯೇ ಉತ್ಸಾಹ ಕಳೆದುಕೊಂಡು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಬಹುದು.