
ಕೋವಿಡ್ ನಿರ್ವಹಣೆಗೆ ಬೆಳಗಾವಿ ಜಿಲ್ಲೆಗೆ ಇದುವರೆಗೆ ಸಿಕ್ಕಿದ್ದು ಬರೀ ರೂ.13.58 ಕೋಟಿ ಮಾತ್ರ; RTI ಅಡಿ ಮಾಹಿತಿ
ಬೆಳಗಾವಿ: ರಾಜ್ಯ ಸರ್ಕಾರ ಕೋವಿಡ್ ನೆಪ ಹೇಳಿ ಮುಂದಿನ ವರ್ಷದ ವರೆಗೆ ಎಲ್ಲ ಹೊಸ ಯೋಜನೆಗಳನ್ನು ಸ್ಥಗಿತಗೊಳಿಸಿದೆ, ಸರ್ಕಾರ ನೌಕರರ ಸಂಬಳ ನೀಡುವಲ್ಲಿಯೂ ವಿಳಂಬ ಮತ್ತು ಕಡಿತ ಮಾಡುತ್ತಿದೆ, ಕೆಲವು ಇಲಾಖೆಗಳಲ್ಲಿ ನೌಕರರಿಗೆ ವಿ.ಆರ್.ಎಸ್ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ, ಇದುವರೆಗೆ ಸರ್ಕಾರ ಕೋವಿಡ್ ನಿರ್ವಹಣೆಗೆ ಮಾಡಿರುವ ವೆಚ್ಚವನ್ನು ಗಮನಿಸಿದರೆ ಇಷ್ಟು ಚಿಕ್ಕ ಮೊತ್ತಕ್ಕೆ ಅಷ್ಟೆಲ್ಲ ಕಡಿತದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಕಳೆದ ವಾರವಷ್ಟೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಡಿದ ರೂ.2 ಸಾವಿರ ಕೋಟಿಯ ಭೃಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ವಿವಿಧ ಇಲಾಖೆಗಳ ಪಂಚ ಸಚಿವರು, ಕೋವಿಡ್ ನಿರ್ವಹಣೆಗಾಗಿ ಇದುವರೆಗೆ ಸರ್ಕಾರದ ಎಲ್ಲ ಇಲಾಖೆಗಳು ಸೇರಿ ಒಟ್ಟಾರೆ ಖರ್ಚು ಮಾಡಿದ್ದು ಬರೀ ರೂ. 2,128 ಕೋಟಿ ಮಾತ್ರ ಅಂತ ಹೇಳಿದ್ದರು. ಇದರಲ್ಲಿ ಬಹುತೇಕ ಹಣ ಖರ್ಚಾಗಿರುವುದು ವೆಂಟಿಲೇಟರ್, ಪಿಪಿಇ ಕಿಟ್ ಮತ್ತು ಮಾಸ್ಕ್ ಖರೀದಿಗಾಗಿ ಅಂತ ಹೇಳಿದ್ದರು. ಆದರೆ ಆಯಾ ಜಿಲ್ಲೆಗಳಲ್ಲಿ ಕೋವಿಡ್ ನಿರ್ವಹಣೆಗಾಗಿ ಮಾಡಿದ ವೆಚ್ಚ ಎಷ್ಟು ಎಂದು ಹೇಳಿರಲಿಲ್ಲ.
ಈಗ ಬೆಳಗಾವಿಯ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು RTI ಅಡಿಯಲ್ಲಿ ಈ ಮಾಹಿತಿಯನ್ನು ತೆಗೆದಿದ್ದು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಮಾಡಿದ ವೆಚ್ಚದ ಪ್ರಮಾಣ ನೋಡಿದರೆ ನಿಮಗೂ ‘ಇಷ್ಟೇನಾ?’ ಅನಿಸಿದರೆ ಆಶ್ಚರ್ಯವಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ಜಿಲ್ಲಾಡಳಿತಗಳ ಮೂಲಕ ಇದುವರೆಗೆ ಕೋವಿಡ್ ನಿರ್ವಣೆಗೆ ಖರ್ಚಾಗಿರುವ ಒಟ್ಟು ವೆಚ್ಚ ಕೇವಲ ರೂ 230 ಕೋಟಿ ಮಾತ್ರ. ಈ ಅನುದಾನವನ್ನು ರಾಜ್ಯ ಸರ್ಕಾರವು ರಾಜ್ಯ ವಿಪತ್ತು ನಿಧಿ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಿದೆ.
ಮೊದಲ ಹಂತದ ರೂ. 151 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ನೀಡಿದ ನಿರ್ದೇಶನದನ್ವಯ ಕೋವಿಡ್ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಜೂನ್ 20 ರಂದು 79.64 ಕೋಟಿಯನ್ನು ಸೋಂಕಿತ ಮತ್ತು ಶಂಕಿತರಿಗಾಗಿ ತಾತ್ಕಾಲಿಕ ನೆಲೆ ಮಾಡಲು, ಅವರಿಗೆ ಆಹಾರ ಮತ್ತು ಬಟ್ಟೆ ಒದಗಿಸುವುದು ಸೇರಿದಂತೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು, ಸ್ಯಾಂಪಲ್ ಸಂಗ್ರಹ ಮತ್ತು ಸ್ಕ್ರೀನಿಂಗ್ ಮತ್ತು ಪ್ರಯೋಗಾಲಯಗಳಲ್ಲಿ ಅಗತ್ಯ ಪರಿಕರಗಳನ್ನು ಖರೀದಿಸಲು ಬಳಸಿಕೊಳ್ಳುವಂತೆ ಸೂಚಿಸಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿದ ಅನುದಾನದಲ್ಲಿ ಇನ್ನೂ ಸಾಕಷ್ಟು ಖರ್ಚಾಗಬೇಕಿದೆ.
ಕೋವಿಡ್ ನಿರ್ವಹಣೆಗೆ ರಾಜ್ಯ ವಿಪತ್ತು ನಿಧಿ ಅಡಿಯಲ್ಲಿ ಬಿಡುಗಡೆಯಾದ ಒಟ್ಟು ಅನುದಾನದಲ್ಲಿ ಅತಿದೊಡ್ಡ ಜಿಲ್ಲೆ ಬೆಳಗಾವಿಗೆ ಸಿಕ್ಕಿರುವುದು ರೂ.13.58 ಕೋಟಿ ಮಾತ್ರ. ಸರ್ಕಾರ ಕೋವಿಡ್ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮೀನಮೇಷ ಮಾಡುತ್ತಿದೆ. ಹೀಗಾಗಿಯೇ ಜಿಲ್ಲಾಸ್ಪತ್ರೆ ಅಥವಾ ಜಿಲ್ಲೆಯ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವ್ಯವಸ್ಥೆ ಕುಸಿದು ಬಿದ್ದಂತಾಗಿದೆ. ಇದೇ ಕಾರಣದಿಂದ ಕೋವಿಡ್ ಎಗ್ಗಿಲ್ಲದೆ ಹರಡುತ್ತಿದೆ. ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿದ್ದರೆ ಇಂದು ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸುರೇಂದ್ರ ಉಗಾರೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.