ಚಿಂಚಲಿ ಮಾಯಕ್ಕ, ಮಂಗಸೂಳಿ ಮಲ್ಲಯ್ಯ ಸೇರಿದಂತೆ ನಾಲ್ಕು ದೇವಸ್ಥಾನ ತೆರೆಯಲು ಶರತ್ತುಬದ್ಧ ಅನುಮತಿ; ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರು ಇನ್ನೂ ಕಾಯಬೇಕು

ಚಿಂಚಲಿ ಮಾಯಕ್ಕ, ಮಂಗಸೂಳಿ ಮಲ್ಲಯ್ಯ ಸೇರಿದಂತೆ ನಾಲ್ಕು ದೇವಸ್ಥಾನ ತೆರೆಯಲು ಶರತ್ತುಬದ್ಧ ಅನುಮತಿ; ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರು ಇನ್ನೂ ಕಾಯಬೇಕು

 

 

ಬೆಳಗಾವಿ: ರಾಯಬಾಗ ತಾಲೂಕು ಚಿಂಚಲಿಯಲ್ಲಿನ ಶ್ರೀ ಮಾಯಕ್ಕ ದೇವಿ ದೇವಸ್ಥಾನ, ಕಾಗವಾಡ ತಾಲೂಕು ಮಂಗಸೂಳಿಯಲ್ಲಿನ ಶ್ರೀ ಮಲ್ಲಯ್ಯ ದೇವಸ್ಥಾನ ಸೇರಿದಂತೆ ಹುಕ್ಕೇರಿ ತಾಲೂಕು ಬಡಕುಂದ್ರಿಯ ಶ್ರೀ ಹೊಳೆಮ್ಮ ದೇವಿ ದೇವಸ್ಥಾನ ಹಾಗೂ ಸವದತ್ತಿ ಹೊರವಲಯದಲ್ಲಿನ ಜೋಗುಳಭಾವಿಯ ಶ್ರೀ ಸತ್ಯಮ್ಮ ದೇವಿ ದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಆದರೆ ಲಕ್ಷಾಂತರ ಭಕ್ತರು ಸೇರುವ ಸವದತ್ತಿಯ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ತೆರೆಯಲು ಇನ್ನೂ ಅನುಮತಿ ನೀಡಲಾಗಿಲ್ಲ.

 

 

ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಆಗುವ ಜನಸಂದಣಿಯನ್ನು ತಡೆಯಲು ಜಿಲ್ಲೆಯ ಹಲವಾರು ಪ್ರಮುಖ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಲಾಗಿರಲಿಲ್ಲ. ಜನಪ್ರತಿನಿಧಿಗಳು, ಭಕ್ತರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನ ತೆರೆಯಲು ಅವಕಾಶ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು. ಒತ್ತಡದ ಹಿನ್ನೆಲೆಯಲ್ಲಿ ಮಹತ್ವದ ಮತ್ತು ಹೆಚ್ಚು ಪ್ರಮಾಣದಲ್ಲಿ ಭಕ್ತರು ಸೇರುವ ನಾಲ್ಕು ದೇವಸ್ಥಾನಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಇನ್ನೂ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿದ್ದು, ಅಲ್ಲಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬರುವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತೆರೆಯಲು ಇನ್ನೂ ಅನುಮತಿ ನೀಡಲಾಗಿಲ್ಲ. ಸವದತ್ತಿಯ ದೇವಸ್ಥಾನ ಕಳೆದ ಒಂದೂವರೆ ವರ್ಷದಿಂದ ಬಂದ್ ಇದೆ.

 

 

ಅನುಮತಿ ನೀಡಲಾಗಿರುವ ದೇವಸ್ಥಾನಗಳಲ್ಲಿ ಜನಸಂದಣಿ ಸೇರುವಂತಹ ವಿಶೇಷ ಉತ್ಸವ ಅಥವಾ ಜಾತ್ರಾ ಕಾರ್ಯಕ್ರಮ ಮಾಡುವುದನ್ನು ಮುಂದಿನ ಆದೇಶದ ವರೆಗೆ ನಿರ್ಬಂಧಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು. ದೇವಸ್ಥಾನ ಆವರಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜರ್ ಇಡಬೇಕು ಹೀಗೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ. ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಕಂಡುಬಂದಲ್ಲಿ ಅನುಮತಿಯನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.