ಅರ್ನಬ್ ಗೋಸ್ವಾಮಿ ಬಂಧನ; ಮೃತರ ಕುಟುಂಬದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ

ಮುಂಬೈ: ಎರಡು ವರ್ಷಗಳ ಹಿಂದೆ ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಪೊಲೀಸರು ಇಂದು ಮುಂಜಾನೆ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ. ಇದು ಧ್ವೇಷಪೂರಿತ ಬಂಧನವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದರೆ, ಕೆಲವು ಪತ್ರಕರ್ತರು ಇದನ್ನು ಪತ್ರಿಕೋದ್ಯಮದ ಮೇಲಿನ ಆಘಾತ ಎನ್ನುತ್ತಿದ್ದು, ದೇಶದಲ್ಲಿ ಚರ್ಚೆಯ ವಿಷಯವಾಗಿದೆ.

ಗೋಸ್ವಾಮಿ ಬಂಧನದ ಬೆನ್ನಲ್ಲೇ ಮೃತ ಅನ್ವಯ ನಾಯಿಕ ಪತ್ನಿ ಮತ್ತು ಮಗಳು ಇಂದು ಪತ್ರಿಕಾಗೋಷ್ಠಿ ನಡೆಸಿ ಉದ್ಧವ ಠಾಕ್ರೆ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. “ ನನ್ನ ಪತಿ ಅನ್ವಯ ನಾಯಿಕ ಅವರು ರಿಪಬ್ಲಿಕ್ ಟಿವಿ ಸ್ಟುಡಿಯೋ ಯೋಜನೆಯಲ್ಲಿ ರೂ 83 ಲಕ್ಷ ಹೂಡಿಕೆ ಮಾಡಿದ್ದರು. ಅದು ನಮ್ಮ ಕಷ್ಟದ ಹಣವಾಗಿತ್ತು. ಆದರೆ ಆ ಹಣವನ್ನು ಅರ್ನಬ್ ಗೋಸ್ವಾಮಿ ವಾಪಸ್ ನೀಡಲಿಲ್ಲ. ಇದರಿಂದ ನಮ್ಮ ಕುಟುಂಬ ಸಾಕಷ್ಟು ತೊಂದರೆಗೆ ಒಳಗಾಯಿತು. ಅರ್ನಬ್ ಹಣ ಪಡೆಯುತ್ತಾರೆ ಆದರೆ ವಾಪಸ್ ಕೊಡುವುದಿಲ್ಲ. ಸಾಯುವಾಗ ನನ್ನ ಪತಿಯು ಅರ್ನಬ್ ಹೆಸರನ್ನು ಪತ್ರದಲ್ಲಿ ಬರೆದಿಟ್ಟು ಹೋಗಿದ್ದರೂ, ಅವರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಾಕ್ಷಿಗಳು ಇಲ್ಲ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿತ್ತು” ಎಂದು ಮೃತ ಅನ್ವಯ ನಾಯಿಕ ಪತ್ನಿ ಆರೋಪಿಸಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಕೃತಜ್ಞತೆ ಹೇಳಿದ್ದಾರೆ.

ಚಿತ್ರನಟ  ಸುಶಾಂತಸಿಂಗ್ ರಜಪೂತ ಅವರ ಅಸಹಜ ಸಾವನ್ನು ಅರ್ನಬ್ ಗೋಸ್ವಾಮಿ ಕೊಲೆ ಎಂದು ಪ್ರತಿಪಾದಿಸಿ ಭಾರೀ ಅಭಿಯಾನ ನಡೆಸಿದ್ದರು. ಆದರೆ ಅಂತಹದೇ ಪ್ರಕರಣದಲ್ಲಿ ಈಗ ಅರ್ನಬ್ ಗೋಸ್ವಾಮಿ ಬಂಧನಕ್ಕೊಳಗಾಗಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *

You cannot copy content of this page