ಹಂಪಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ತಲೆಎತ್ತಲಿದೆ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಹಂಪಿಯ ಹೊರವಲಯದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ ತಲೆ ಎತ್ತಲಿದೆ. ರಾಮಜನ್ಮಭೂಮಿ ಇರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿ ಅವರು ಈ ವಿಚಾರವನ್ನು ತಿಳಿಸಿದ್ಧಾರೆ.

ನಿನ್ನೆ ಅವರು ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದ ಬಳಿಕ ಇದನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿರುವ ಪಂಪಾಪುರದಲ್ಲಿ 215 ಮೀಟರ್ ಎತ್ತರದ ಹನುಮನ ವಿಗ್ರಹ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕೆ ಅಂದಾಜು 1,200 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.


ಹಂಪಿಯ ಪಂಪಾಪುರವು ರಾಮಾಯಣದಲ್ಲಿ ಬರುವ ಕಿಷ್ಕಿಂದೆ ಸ್ಥಳ ಎಂದು ನಂಬಲಾಗಿದೆ. ಹನುಮಂತ ಇದೇ ಕಿಷ್ಕಿಂದೆಯಲ್ಲಿ ಜನಿಸಿದ್ದು ಎಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ. ಹನುಮಂತನ ವಿಗ್ರಹ ಸ್ಥಾಪನೆಗೆ ಹಣ ಸಂಗ್ರಹಿಸಲು ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಸ್ಥೆಯು ರಾಷ್ಟ್ರವ್ಯಾಪಿ ರಥಯಾತ್ರೆ ನಡೆಸಲಿದೆ ಎಂದು ಟ್ರಸ್ಟ್​ನ ಅಧ್ಯಕ್ಷ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 6 ವರ್ಷದಲ್ಲಿ ಹಂಪಿಯ ಹಂಪಾಪುರದಲ್ಲಿ ವಿಶ್ವದ ಅತಿ ಎತ್ತರದ ಆಂಜನೇಯನ ಮೂರ್ತಿ ನಿರ್ಮಾಣವಾಗಲಿದೆ.ಇದೇ ವೇಳೆ, ಅಯೋಧ್ಯೆಯಲ್ಲಿ ಶ್ರೀ ರಾಮನ ಬೃಹತ್ ಪ್ರತಿಮೆ ನಿರ್ಮಿಸಲಾಗುತ್ತಿದೆ. ಇದು 221 ಮೀಟರ್ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಆಗಿರಲಿದೆ. ಹನುಮಂತನ ಪ್ರತಿಮೆ ರಾಮನದಕ್ಕಿಂತ ದೊಡ್ಡದಿರುವುದು ಬೇಡವೆಂದು ಹಂಪಿಯಲ್ಲಿ ತುಸು ಕಡಿಮೆ ಎತ್ತರದ ಹನುಮಂತನ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿದೆ

Leave a Reply

Your email address will not be published. Required fields are marked *

You cannot copy content of this page