ದಿನಸಿ, ಹಾಲು, ತರಕಾರಿಗಾಗಿ ಪರದಾಟ; ಹಿರೇಬಾಗೇವಾಡಿಯಲ್ಲಿ ಹೆಚ್ಚುತ್ತಿರುವ ಜನಾಕ್ರೋಶ

ಬೆಳಗಾವಿ: ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಹಿರೇಬಾಗೇವಾಡಿಯಲ್ಲಿ ಜನಾಕ್ರೋಶ ಮಡುಗಟ್ಟುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಯಾವುದೇ ಸಂದರ್ಭದಲ್ಲಿ ಅದು ಸ್ಫೋಟಗೊಳ್ಳುವ ಸಾಧ್ಯತೆ ಇದೆ. ರಾಜ್ಯದ ಅತ್ಯಂತ ರೆಡ್ ಹಾಟ್ ಸ್ಪಾಟ್ ಆಗಿರುವ ಹಿರೇಬಾಗೇವಾಡಿಯಲ್ಲಿ ದಿನಸಿ, ತರಕಾರಿ ಸೇರಿದಂತೆ ಹಾಲಿಗಾಗಿಯೂ ಜನರು ಪರದಾಡಬೇಕಾಗಿದ್ದು, ಸೀಲ್ ಡೌನ್ ಮಾಡಿದಾಕ್ಷಣ ಸರ್ಕಾರದ ಜವಾಬ್ದಾರಿ ಮುಗಿಯಿತೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಹಿರೇಬಾಗೇವಾಡಿಯಲ್ಲಿ ನಿರಂತರವಾಗಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಲೇ ಇರುವುದರಿಂದ ಇಲ್ಲಿ ಎಲ್ಲವನ್ನೂ ಬಂದ್ ಮಾಡಿಸಲಾಗಿದೆ. ಇತರೆ ಕಡೆಗಳಂತೆ ಇಲ್ಲಿ ಸರ್ಕಾರದ ದಿನಸಿ ಕಿಟ್ ಅಥವಾ ಹಾಲು ಹಂಚಲಾಗುತ್ತಿಲ್ಲ. ಕಂಟೇನ್ಮೆಂಟ್ ಝೋನ್ ಆಗಿರುವುದರಿಂದ ರಸ್ತೆಯಲ್ಲಿ ತರಕಾರಿ, ಹಣ್ಣು ಮಾರಾಟಕ್ಕೂ ಅವಕಾಶವಿಲ್ಲ. ಇಲ್ಲಿಯ ಜನರು ಹಣ್ಣುಗಳನ್ನು ಕಂಡು ಎಷ್ಟೋ ದಿನಗಳಾಗಿವೆ. ಹಾಗೆ ನೋಡಿದರೆ ಜಿಲ್ಲಾಡಳಿತವೇ ಜನರ ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಸ್ಥಳೀಯ ಶಾಸಕರು ಮತ್ತು ಇತರೆ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಆ ಕೆಲಸ ಮಾಡಿಸಬೇಕು. ಆದರೆ, ತಿಂಗಳು ಗತಿಸಿದರೂ ಇಲ್ಲಿಯ ಜನರಿಗೆ ಏನೂ ದಕ್ಕಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮವನ್ನು ಸ್ಯಾನಿಟೈಜ್ ಮಾಡುವ ಅಗತ್ಯವಿದೆ. ತಿಂಗಳಾದರೂ ಅದನ್ನು ಮಾಡಲಾಗಿಲ್ಲ. ಜನರ ಸಮಸ್ಯೆಗಳ ಬಗ್ಗೆ ‘ಟುಡೇ ಬ್ರೇಕಿಂಗ್ಸ್’ ಗಮನ ಸೆಳೆದ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಹೋಗಿ ಜನರಿಗೆ ಕಾಯಿಪಲ್ಯೆ ಹಂಚಿ ಬಂದಿದ್ದಾರೆ. ಆದರೆ, ಜನರ ಆಗ್ರಹದಂತೆ ಗ್ರಾಮವನ್ನು ಸ್ಯಾನಿಟೈಜ್ ಮಾಡಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ತಿಂಗಳಾದರೂ ದಿನಸಿ ಇಲ್ಲದೆ, ಹಾಲು-ತರಕಾರಿ ಇಲ್ಲದೆ ಜನರು ಪರದಾಡುತ್ತಿದ್ದರೂ ಯಾರೂ ಕೇಳುವವರು ಇಲ್ಲದ ಕಾರಣ ಇಲ್ಲಿಯ ಜನರು ಆಕ್ರೋಶಗೊಂಡಿದ್ದಾರೆ. ಕೆಲವರ ಬಳಿ ದಿನಸಿ ಇದೆ ಆದರೆ ಅಡಿಗೆ ಮಾಡಿಕೊಳ್ಳಲು ಇತರೆ ಸರಂಜಾಮುಗಳಿಲ್ಲ.

ಅಧಿಕಾರಿಗಳು ಜನರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಶಾಸಕರು ಬಂದು ಊರ ಹೊರಗಡೆಯೇ ಕೆಲವರಿಗೆ ಭೇಟಿ ಮಾಡಿ ಹೋಗುತ್ತಾರೆ. ನಾವು ನಮ್ಮ ಅಳಲನ್ನು ಯಾರಿಗೆ ಹೇಳಬೇಕು ಎಂದು ಜನರು ಅಲವತ್ತುಕೊಳ್ಳುತ್ತಿದ್ದಾರೆ. ಏನೇ ಆಗಲಿ, ತಡವಾಗಿಯಾದರೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಹಿರೇಬಾಗೇವಾಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ‘ದಿನದ 24 ಗಂಟೆಯೂ ನಿಮ್ಮ ಸೇವೆಗೆ ಸಿದ್ಧನಿದ್ದೇನೆ’ ಎಂದು ವಾಗ್ದಾನ ಮಾಡಿದ್ದಾರೆ.

ಶಾಸಕಿ ಹೆಬ್ಬಾಳಕರ ಅವರು ಹಿರೇಬಾಗೇವಾಡಿಗೆ ಭೇಟಿ ಕೊಟ್ಟಾಗಲೊಮ್ಮೆ ಎಲ್ಲಾ ಕಡೆಯೂ ಸುದ್ದಿಯಾಗುತ್ತದೆ ಆದರೆ ಹೇಳಿಕೊಳ್ಳುವಂತಹ ಅನುಕೂಲವೇನೂ ಆಗುತ್ತಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಹಿರೇಬಾಗೇವಾಡಿ ಜನರ ಸಂಕಷ್ಟ ಕೆಲಮಟ್ಟಿಗೆ ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರವೀಂದ್ರ ಉಪ್ಪಾರ

Leave a Reply

Your email address will not be published. Required fields are marked *

You cannot copy content of this page