ಬೆಳಗಾವಿಯಲ್ಲಿ ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ಅಮ್ಮ’ ಪ್ರಶಸ್ತಿ ವಿತರಣೆ

ಬೆಳಗಾವಿ :ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದೆ ಎಂದು ಲಿಂಗಾಯತ ಧರ್ಮ ಮಹಾಪೀಠದ ಜಗದ್ಗುರು ಬಸವಪ್ರಭು ಸ್ವಾಮೀಜಿ ಹೇಳಿದರು.

ರತ್ನಾಬಾಯಿ ಮತ್ತು  ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಹಾಗೂ ಶ್ರೀ ಸಾಯಿ ಫೌಂಡೇಶನ್ ಆಶ್ರಯದಲ್ಲಿ ಬೆಳಗಾವಿಯ ಆಂಜನೇಯ ನಗರದ ಲಿಂಗಾಯತ ಧರ್ಮಪೀಠದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅಮ್ಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ  ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯಾಗುತ್ತಾನೆ. ಪ್ರಾಥಮಿಕ ಹಂತದಲ್ಲೇ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಶಾಲೆಗಳಲ್ಲಿ ಪೂಜೆ, ಪುನಸ್ಕಾರಗಳಿಗೆ ಆದ್ಯತೆ ನೀಡದೇ ಮಕ್ಕಳ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಹಬ್ಬ ಹರಿದಿನಗಳಲ್ಲಿ ಸಿಡಿಮದ್ದು ಸುಡಲು ನಾವು ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡುತ್ತೇವೆ. ಸಿಡಿಮದ್ದು ಸುಡುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ನಮ್ಮ ಹಣವೂ ವ್ಯರ್ಥವಾಗಿ ಖರ್ಚಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆ ಮೇಲೆ ಸಾಲದ ಹೊರೆಯಿದೆ. ನಮ್ಮ ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬೇರೆ ಚಿಕ್ಕ ದೇಶಗಳಿಂದ ಸಾಲ ಪಡೆಯುವಂತಹ ದುಸ್ಥಿತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರತ್ನಾಬಾಯಿ- ಕಲ್ಲಪ್ಪ ಉದಗಟ್ಟಿ ಪ್ರತಿಷ್ಠಾನ ಮತ್ತು ಸಾಯಿ ಫೌಂಡೇಶನ್ ಸಂಸ್ಥೆಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವವರನ್ನು ಗುರುತಿಸಿ, ಅವರನ್ನು ಪ್ರಶಸ್ತಿ, ಸನ್ಮಾನಗಳ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಮಾತೃಭಾಷೆಯ ಮೇಲೆ ಅಭಿಮಾನವಿರಬೇಕು. ಜೊತೆಗೆ ಇತರೆ ಭಾಷೆಗಳ ಬಗ್ಗೆಯೂ ಗೌರವ ಭಾವನೆ ಇರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಕೊರೋನಾ ವೈರಸ್‌ನಿಂದ ಇಡೀ ಜಗತ್ತೇ ತಲ್ಲಣಗೊಂಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರು ಕೊರೋನಾ ವಾರಿಯರ್ಸ ಆಗಿ ಸೇವೆ ಸಲ್ಲಿಸಿದ್ದಾರೆ. ಇಂತಹವರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವ ರತ್ನಾಬಾಯಿ ಕಲ್ಲಪ್ಪ ಉದಗಟ್ಟಿ ಪ್ರತಿಷ್ಠಾನದ ಸೇವೆ ಮೆಚ್ಚುವಂತಹದ್ದು. ಇಂತಹ ಕಾರ್ಯಕ್ರಮ ನಿರಂತವಾಗಿ ಸಾಗಲಿ ಎಂದು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಹಾಗೂ ಅಮ್ಮಾ ಪ್ರಶಸ್ತಿ ಸ್ವೀಕರಿಸಿದ ಶ್ರೀ ಅರ್ಥೋ ಟ್ರಾಮಾ ಆಸ್ಪತ್ರೆಯ ನಿರ್ದೇಶಕ ಡಾ.ದೇವೇಗೌಡ ಇಮಗೌಡನವರ ಮಾತನಾಡಿ, ಕೋವಿಡ್ ೧೯ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊರೋನಾ ವಾರ್ಡ ಸ್ಥಾಪಿಸಿ, ಸೋಂಕಿತರಿಗೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದೇವೆ. ಆಯುಷಮಾನ್ ಭಾರತ -ಕರ್ನಾಟಕ ಆರೋಗ್ಯ ಕಾರ್ಡ ಹೊಂದಿದವರಿಗೆ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ನೀಡಿದ್ದೇವೆ. ನಮ್ಮ ಸೇವೆಯನ್ನು ಗುರುತಿಸಿ, ನಮ್ಮನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತಿರುವ ಎರಡೂ ಸಂಸ್ಥೆಗಳಿಗೆ ಕೊರೋನಾ ವಾರಿಯರ್ಸ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಗೋಡಿಗೌಡರ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ. ನಾವು ಮೊದಲು ನಮ್ಮ ಮನೆಯಲ್ಲಿ ಮಾತೃಭಾಷೆಯನ್ನು ಮಾತನಾಡಬೇಕು. ಕನ್ನಡ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು. ಕನ್ನಡಿಗರಿಗೆ ಕೇವಲ ನವಂಬರ್ ತಿಂಗಳಲ್ಲಿ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಮೂಡದೇ ಪ್ರತಿದಿನವೂ ಕನ್ನಡವನ್ನು ಪ್ರೀತಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

ರತ್ನಾಬಾಯಿ ಮತ್ತು ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನದ ಅಧ್ಯಕ್ಷ ಬಾಳಾಸಾಹೇಬ ಉದಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಾಯಿ ಫೌಂಡೇಶನ್ ಅಧ್ಯಕ್ಷೆ ಪುಷ್ಪಾ ಶೀಲವಂತರ, ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ರೂಪಾ ಕೂಡಲಗಿಮಠ, ಬಾಬು ಸಂಗೋಡಿ , ಡಾ.ಸವಿತಾ ಕದ್ದು, ಸಮಾಜ ಸೇವಕ ಸುರೇಂದ್ರ ಅನಗೋಳಕರ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ ಆಗಿ ಸೇವೆ ಸಲ್ಲಿಸಿದ ವೈದ್ಯರು, ಸ್ಟಾಪ್ ನರ್ಸಗಳು, ಆಶಾ ಕಾರ್ಯಕರ್ತರು, ಪೊಲೀಸರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *

You cannot copy content of this page