ನಿಪ್ಪಾಣಿಯಲ್ಲಿ ಎತ್ತಿನ ಬಂಡಿ ಏರಿಬಂದು ಕಬ್ಬು ನಾಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ

ನಿಪ್ಪಾಣಿಯಲ್ಲಿ ಎತ್ತಿನ ಬಂಡಿ ಏರಿಬಂದು ಕಬ್ಬು ನಾಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ

 

ಬೆಳಗಾವಿ: ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮಕ್ಕೆ ಇಂದು ಮುಂಜಾನೆ ಭೇಟಿ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿಸಿ ಬರಮಾಡಿಕೊಂಡಿದ್ದಾರೆ. ಝಾಂಜ್ ಪಥಕ್, ಡೊಳ್ಳು ಹಾಗೂ ವಿವಿಧ ವಾದ್ಯ ಮೇಳಗಳ ಸದ್ದಿನ ನಡುವೆ ಅದ್ದೂರಿಯಾಗಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರಿಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಸಾಥ್ ನೀಡಿದರು.

 

‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರ ಮೆರವಣಿಗೆಯಲ್ಲಿ ನೂರಾರು ಮಹಿಳೆಯಲ್ಲಿ ಪೂರ್ಣಕುಂಭ ಹೊತ್ತು ಭಾಗವಹಿಸಿದ್ದರು. ರಸ್ತೆಯಾದ್ಯಂತ ಮಹಿಳೆಯರಿಂದ ರಂಗೋಲಿ ಬಿಡಿಸಲಾಗಿತ್ತು. ‘ಜೈ ಜವಾನ ಜೈ ಕಿಸಾನ’ ಘೋಷಣೆಗಳ ನಡುವೆ ನರಸಿಂಹ ಚೌಗಲೆ ಅವರ ಹೊಲದಲ್ಲಿ ಕಬ್ಬು ನಾಟಿ ಮಾಡಿದ ಸಚಿವರು ಅಲ್ಲಿಯೇ ಆಯೋಜಿಸಲಾಗಿದ್ದ ಕಬ್ಬಿನ ಬೆಳೆಯ ವಿವಿಧ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

 ರೈತರು ಮುಖ್ಯ‌ ಬೆಳೆಯ ಜತೆಗೆ ಇತರೆ ಉಪ ಬೆಳೆಗಳನ್ನು ಬೆಳೆಯಬೇಕು. ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಬಿ.ಸಿ.ಪಾಟೀಲ ರೈತರಿಗೆ ಕರೆ ನೀಡಿದರು.

 

 ಸಚಿವರ ಜೊತೆ ಸಂವಾದ ನಡೆಸಿದ ರೈತರು ಬೆಳೆದ ಸಾವಯವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ಅತಿವೃಷ್ಟಿ ಹಾಗೂ ವೇದಗಂಗಾ ಮತ್ತು ದೂಧಗಂಗಾ ನದಿಗಳ ಪ್ರವಾಹದಿಂದ ಸಾವಿರಾರು ಎಕರೆ ಸೊಯಾಬಿನ್ ಬೆಳೆ ನಾಶವಾಗಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡಬೇಕು. ಮುಂದಿನ ಬೆಳೆ ಬೆಳೆಯುವ ಮುಂಚೆಯೇ ಪರಿಹಾರ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.

 

 ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ಜಲಾನಯನ ವಿಭಾಗದ‌ ನಿರ್ದೇಶಕಿ ನಂದಿನಿ ಕುಮಾರಿ, ಅಪರ ನಿರ್ದೇಶಕ ಡಾ.ವಿ.ಜೆ.ಪಾಟೀಲ, ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಬೆಳಗಾವಿ ಜಂಟಿ‌ ನಿರ್ದೇಶಕ ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ್ ಮತ್ತಿತರರು ಉಪಸ್ಥಿತರಿದ್ದರು.