ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಗರಿಗೆದರಿದ ಚಟುವಟಿಕೆ: ಸಿಎಂ ಪಟ್ಟಕ್ಕೆ ಸವದಿ, ಯತ್ನಾಳ ಹೆಸರು ಮುಂಚೂಣಿಯಲ್ಲಿ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೈಕಮಾಂಡ ಮಟ್ಟದಲ್ಲಿ ತೀವ್ರ ಚಟುವಟಿಕೆಗಳು ಆರಂಭವಾಗಿವೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಅಖಾಡಾಕ್ಕೆ ಇಳಿದಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ನಾಯಕತ್ವ ಬದಲಾವಣೆಗೆ ಚಟುವಟಿಕೆಗಳು ಗರಿಗೆದರಿದ ಬಳಿಕ ಮುಂದಿನ ಸಿಎಂ ಸ್ಥಾನಕ್ಕೆ ಹಲವಾರು ನಾಯಕರ ಹೆಸರುಗಳು ತೇಲಾಡುತ್ತಿದ್ದು, ಲಕ್ಷ್ಮಣ ಸವದಿ ಮತ್ತು ಬಸವರಾಜ ಪಾಟೀಲ (ಯತ್ನಾಳ) ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದೂ ಫೈರ್ ಬ್ರ್ಯಾಂಡ್ ಆಗಿರುವ ಬಸವರಾಜ ಯತ್ನಾಳ ಅವರು ಹಲವು ಸಲ ಪಕ್ಷಕ್ಕೆ ಮುಜುಗರವಾಗುವ ಹೇಳಿಕೆಗಳನ್ನು ನೀಡಿದ್ದರೂ ಅವರ ಹೆಸರು ಮುನ್ನಲೆಗೆ ಬಂದಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಹೆಸರೂ ಮುಂಚೂಣಿಯಲ್ಲಿದ್ದು, ಸವದಿ ಅವರತ್ತ ಪ್ರಧಾನಿ ಮೋದಿ ಹೆಚ್ಚಿನ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಈಗಲೇ ನಾಯಕತ್ವ ಬದಲಾವಣೆ ಮಾಡಿದರೆ ಮುಂದಿನ ಮೂರು ವರ್ಷಗಳಲ್ಲಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಹೊಸ ಸಿಎಂಗೆ ಕಾಲಾವಕಾಶ ದೊರೆಯುತ್ತದೆ. ಮುಂದಿನ ಚುನಾವಣೆಯನ್ನು ಅದೇ ನೇತೃತ್ವದ ಅಡಿಯಲ್ಲಿ ನಡೆಸಬಹುದು ಎಂದು ಪಕ್ಷದ ಹೈಕಮಾಂಡ್ ಚಿಂತನೆ ನಡಸಿದೆ ಎಂದು ಹೇಳಲಾಗುತ್ತಿದೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page