ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಶಾಸಕ ಅಭಯ ಪಾಟೀಲ ಸಂಕಲ್ಪ

ಬೆಳಗಾವಿ: ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ಪ್ರಸ್ತಾವಣೆಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಬೆಳಗಾವಿ ನಗರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ.

ಯಳ್ಳೂರು ಗ್ರಾಮದ ಹದ್ದಿಯಲ್ಲಿರುವ 40 ಎಕರೆ ಸರ್ಕಾರಿ ಜಾಗೆಯಲ್ಲಿ ಈ ಕ್ರೀಡಾಂಗಣ ನಿರ್ಮಿಸುವ ಸಂಕಲ್ಪ ಅಭಯ ಪಾಟೀಲ ಅವರದಾಗಿದ್ದು, ಇಂದು ಕ್ರೀಡಾ ಇಲಾಖೆ ಆಯುಕ್ತ  ಶ್ರೀನಿವಾಸ ಜೊತೆಗೆ ಯಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಜಾಗೆಯನ್ನು ಪರಿಶೀಲಿಸಿದರು. ಪೂಣೆಯ ಬಾಲೆವಾಡಿಯಲ್ಲಿರುವ ಅಂತರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದ ಮಾದರಿಯಲ್ಲಿ ಈ ಯೋಜನೆಯನ್ನು ಕಾರ್ಯಾನ್ವಿತಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ ಪಾಟೀಲ, ಬೆಳಗಾವಿ ನಗರ ಫೌಂಡ್ರಿ ಉದ್ಯಮ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತೆ ಕ್ರೀಡಾರಂಗದಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಂಕಲ್ಪ ಮಾಡಿದ್ದೇನೆ. ಯಳ್ಳೂರ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಯೋಚಿಸಲಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಹಲವಾರು ಬಾರಿ ಚರ್ಚೆ ಮಾಡಿ ಗಮನ ಸೆಳೆದಿದ್ದೇನೆ ಎಂದು ಹೇಳಿದರು



ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಕ್ರೀಡಾಪಟುಗಳಿದ್ದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ಕ್ರಿಕೆಟ್ ಹೊರತುಪಡಿಸಿ ಟೆನಿಸ್ ಪುಟ್ ಬಾಲ್, ವ್ಹಾಲಿಬಾಲ್, ಜಿಮ್ನ್ಯಾಸ್ಟಿಕ್ ಸೇರಿದಂತೆ ಎಲ್ಲ ಕ್ರೀಡೆಗಳನ್ನು ಒಂದೇ ಸೂರಿನ ಕೆಳಗೆ ನಡೆಸುವುದು ಸಾಧ್ಯವಾಗಲಿದೆ. ಇದರ ಜೊತೆಗೆ ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನವೂ ಸಿಗಲಿದೆ. ಇದರಿಂದ ಬೆಳಗಾವಿ ಆರ್ಥಿಕವಾಗಿಯೂ ಬೆಳೆಯಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.



ದಕ್ಷಿಣ ಭಾರತದಲ್ಲೇ ಇಂತಹ ಒಳಾಂಗಣ ಕ್ರೀಡಾಂಗಣ ಇಲ್ಲ. ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆಗುತ್ತಿರುವದು ಮತ್ತು ಸರ್ಕಾರ ಅದಕ್ಕೆ ಸಮ್ಮತಿ ಸೂಚಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page