ಜಾಗತಿಕ ಲಿಂಗಾಯತ ಮಹಾಸಭಾದ ಮುಖ್ಯ ಕಚೇರಿ ಆಗಲಿದೆ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್; ದೊಡ್ಡ ಮಟ್ಟದ ಹೋರಾಟಕ್ಕೆ ನಡೆದಿದೆ ತಯಾರಿ

ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಅದು ಮುಂದುವರಿಯಲಿದೆ ಎಂದು ಇತ್ತೀಚಿಗಷ್ಟೇ ಎಂ.ಬಿ.ಪಾಟೀಲ ಹೇಳಿದ್ದರು. ಅವರ ಹೇಳಿಕೆಯ ಹಿಂದೆ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿಯಲ್ಲಿ ತೆಗೆದುಕೊಂಡ ನಿರ್ಣಯಗಳೇ ಕಾರಣ ಎಂದು ಹೇಳಲಾಗುತ್ತಿದೆ. ಪ್ರತ್ಯೇಕ ಧರ್ಮದ ಹೋರಾಟದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಉತ್ತರ ಕರ್ನಾಟಕವೇ ಸೂಕ್ತ ಎಂದು ಸಮಿತಿ ತೀರ್ಮಾನಕ್ಕೆ ಬಂದಿದ್ದು, ಬೆಳಗಾವಿಯಲ್ಲಿಯೇ ಮಹಾಸಭಾದ ಕೇಂದ್ರ ಕಚೇರಿ ತೆರೆಯುವ ಠರಾವು ಅಂಗೀಕರಿಸಲಾಗಿದೆ.
ಮಹಾಸಭಾದ ಮುಖ್ಯ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಬೇಕೆನ್ನುವ ವಿಷಯ ಕಳೆದೊಂದು ವರ್ಷದಿಂದ ಚರ್ಚೆಯಲ್ಲಿತ್ತು. ತಾತ್ಕಾಲಿಕವಾಗಿ ಕಚೇರಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿತ್ತು. ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಶ್ರೀಗಳು ಮಹಾಸಭಾದ ಕಚೇರಿಗೆ ಕಟ್ಟಡವನ್ನು ನೀಡುವುದಾಗಿ ತಿಳಿಸಿದ್ದು, ಹೀಗಾಗಿ ಮಹಾಸಭಾದ ನೋಂದಾಯಿತ ಕಾರ್ಯಾಲಯ ಮತ್ತು ಕೇಂದ್ರ ಸ್ಥಾನವನ್ನು ಬೆಳಗಾವಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಸಭೆಯ ಮತ್ತೊಂದು ಪ್ರಮುಖ ತೀರ್ಮಾನವೆಂದರೆ ‘ರಾಷ್ಟ್ರೀಯ ಬಸವ ದಳ’ವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಎಂದು ಪರಿಗಣಿಸಿರುವುದು. ಮಹಾಸಭಾದ ಜೊತೆಗೆ ಬಸವದಳವು ಜಂಟಿಯಾಗಿ ಯುವಕರನ್ನು ಸಂಘಟಿಸಲಿದೆ. ಸದಸ್ಯತ್ವ ಅಭಿಯಾನವನ್ನೂ ನಡೆಸಲಿದೆ. ಇದರ ಜೊತೆಗೆ ಮಹಾಸಭಾದ ಮೀಡಿಯಾ ಶೆಲ್, ಲೀಗಲ್ ಶೆಲ್, ಐಟಿ ಶೆಲ್, ಯುವ ವಿಭಾಗ, ಮಹಿಳಾ ವಿಭಾಗ, ಬಸವಪರ ಶ್ರೀಮಠಗಳ ಒಕ್ಕೂಟದೊಂದಿಗೆ ಅನ್ಯೋನ್ಯತೆ ಬೆಳೆಸುವ ಶೆಲ್, ಬಹುಸಂಖ್ಯಾತ ಲಿಂಗಾಯತರು ಇರುವ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಸಂಘಟಿಸುವ ಶೆಲ್, ಮಹಾರಾಷ್ಟ್ರ ರಾಜ್ಯದಲ್ಲಿರುವ ಜಾಗತಿಕ ಮಹಾಸಭಾದ ಜಿಲ್ಲಾ ಘಟಕಗಳ ಜೊತೆಗೆ ಅನ್ಯೋನ್ಯತೆ ಬೆಳೆಸುವ ಶೆಲ್ ಮತ್ತು ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿ ಮಹಾಸಭಾದ ಘಟಕಗಳನ್ನು ಸ್ಥಾಪಿಸುವ ಶೆಲ್ ಸ್ಥಾಪಿಸುವ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಕೆಲವೇ ತಿಂಗಳಲ್ಲಿ ಮಹಾಸಭಾದ ಸುಸಜ್ಜಿತ ವೆಬಸೈಟ್ ಅಸ್ತಿತ್ವಕ್ಕೆ ಬರಲಿದೆ.
ಜಾಗತಿಕ ಲಿಂಗಾಯತ ಮಹಾಸಭಾವನ್ನು ಸಂಪೂರ್ಣವಾಗಿ ರಾಜಕೀಯೇತರ ಸಂಸ್ಥೆಯಾಗಿ ರೂಪಿಸುವುದು ಹಾಗೂ ಇದರ ಜೊತೆಗೆ ವಚನ ಸಾಹಿತ್ಯ, ಅದರ ತತ್ವಜ್ಞಾನ, ಧರ್ಮ ಸಿದ್ಧಾಂತ, ಮತಾಚರಣೆ ಹಾಗೂ ಧರ್ಮಾಚರಣೆಗಳನ್ನು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವುದು. ಇಲ್ಲಿಯವರೆಗೆ ಪ್ರಾರಂಭ ಆಗದಿರುವ ಜಿಲ್ಲಾ, ತಾಲೂಕು, ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಹಾಸಭಾದ ಘಟಕಗಳನ್ನು ಸಂಘಟಿಸುವುದು. ಲಿಂಗಾಯತ ಧರ್ಮದ 101 ಉಪಪಂಗಡಗಳ ಮತ್ತು ಅವುಗಳ ಸಂಸ್ಥೆಗಳಲ್ಲಿರುವ ಕನಿಷ್ಟ 2 - 3 ಲಕ್ಷ ಜನರನ್ನು ಮಹಾಸಭಾದ ಸದಸ್ಯರನ್ನಾಗಿ ಮಾಡುವುದು ಹಾಗೂ ಭಾರತಾದ್ಯಂತ ಇರುವ ಲಿಂಗಾಯತ ಸಮಾಜದ ಕ್ಷೇಮಾಭಿವೃದ್ಧಿ, ಒಕ್ಕಟ್ಟು ಮತ್ತು ಅಭಿವೃದ್ಧಿಗಾಗಿ ಕ್ರಮ ಜರುಗಿಸುವ ಕುರಿತಂತೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪ್ರಮುಖವಾಗಿ ರಾಜಕೀಯ ಪಕ್ಷಗಳು ಮತ್ತು ಅವುಗಳ ನಡುವಿನ ತಿಕ್ಕಾಟಗಳು ಹಾಗೂ ಶ್ರೀಮಠಗಳ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಗಮನ ಹರಿಸಬಾರದು ಎನ್ನುವ ತೀರ್ಮಾನಕ್ಕೆ ಬರಲಾಗಿದ್ದು, ಬೆದರಿಕೆ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿರುವ ಲಿಂಗಾಯತ ಸಂಸ್ಥೆಗಳನ್ನು ಸಂರಕ್ಷಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.