ಪರಿಷತ್ ಚುನಾವಣೆ; ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

ಪರಿಷತ್ ಚುನಾವಣೆ; ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

 

ಬೆಳಗಾವಿ: ಜಿಲ್ಲೆಯಲ್ಲಿನ ಎರಡು ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ, ಬಿಜೆಪಿಯ ಮಹಾಂತೇಶ ಕವಟಗಿಮಠ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಖನ್ ಜಾರಕಿಹೊಳಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಯಲ್ಲಿ ಪ್ರಥಮ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಯಾರಿಗೆ ಹಾಕಬೇಕು ಎನ್ನುವ ಗೊಂದಲ ಮತದಾರರಲ್ಲಿ ಮುಂದುವರಿದಿದೆ. ಕೆಲವು ಬಿಜೆಪಿ ನಾಯಕರು ಪ್ರಥಮ ಪ್ರಾಶಸ್ತ್ಯದ ಒಂದೇ ಮತ ಚಲಾಯಿಸುವಂತೆ ಪ್ರಚಾರ ನಡೆಸುತ್ತಿದ್ದರೆ, ಮತ್ತಷ್ಟು ನಾಯಕರು ಪ್ರಥಮ ಮತ್ತು ದ್ವಿತೀಯ ಪ್ರಾಶಸ್ತ್ಯದ ಎರಡೂ ಮತಗಳನ್ನು ಚಲಾಯಿಸುವಂತೆ ಹೇಳುತ್ತಿದ್ದಾರೆ. ಪ್ರಚಾರದ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಒಗ್ಗಟ್ಟು ಕಾಣುತ್ತಿಲ್ಲ.

ಜಿಲ್ಲೆಗೆ ಪ್ರಚಾರಕ್ಕಾಗಿ ಬರುವ ಬಿಜೆಪಿ ಮುಖಂಡರು ಮತ್ತು ಸಚಿವರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಎಂದು ಮೇಲಿನ ಮಾತಿಗೆ ಹೇಳುತ್ತಿದ್ದರೂ, ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯ ಪ್ರತಿಸ್ಪರ್ಧಿ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯಲ್ಲಿನ ಬಹಳಷ್ಟು ಮುಖಂಡರು ಪಕ್ಷೇತರ ಅಭ್ಯರ್ಥಿ ಪರ ಮೃದು ಧೋರಣೆ ಹೊಂದಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಅದೇ ಈಗ ಬಿಜೆಪಿಯ ದೊಡ್ಡ ತಲೆನೋವಾಗಿದೆ. ಇತ್ತೀಚಿಗೆ ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗದ ಹಾಗೆ ನೋಡಿಕೊಳ್ಳುವಂತೆ ರಮೇಶ ಜಾರಕಿಹೊಳಿ ಅವರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಅವರ ಮಾತಿನಲ್ಲಿಯೂ ಸ್ಪಷ್ಟತೆ ಇಲ್ಲದ ಕಾರಣ ಗೊಂದಲ ಮುಂದುವರಿದಿದೆ.

ಇನ್ನು ಕಾಂಗ್ರೆಸ್ ನಲ್ಲಿ ಹೇಳಿಕೊಳ್ಳುವಷ್ಟು ಗೊಂದಲಗಳೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಜಿಲ್ಲೆಯಾದ್ಯಂತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಎರಡು ಬಾರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಒಂದು ಬಾರಿ ಜಿಲ್ಲೆಗೆ ಬಂದು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಆ ಮೂಲಕ ಅಭ್ಯರ್ಥಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.

ಜಾರಕಿಹೊಳಿ ಅವರದ್ದು ಕುಟುಂಬ ರಾಜಕೀಯ. ಹೀಗಾಗಿ ಕೊನೆ ಘಳಿಗೆಯಲ್ಲಿ ಸತೀಶ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಲಖನ್ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನುವ ಗುಮಾನಿ ಹರಿಬಿಡಲಾಗಿದ್ದರೂ, ಅಂತಹ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಕಾರಣ ಸತೀಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ದೊಡ್ಡ ಹುದ್ದೆಯಲ್ಲಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತಿದೆ.

ವಿಧಾನ ಪರಿಷತ್ ಚುನಾವಣೆಗಳಲ್ಲಿ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆಗಿಂತ ಕಾಂಚಾನನಿಷ್ಠೆ ಹೆಚ್ಚು ಸದ್ದು ಮಾಡುತ್ತದೆ. ಇನ್ನೇನು ಅಭ್ಯರ್ಥಿಗಳಿಂದ ಮತದಾರರಿಗೆ ಕಾಣಿಕೆ ಅರ್ಪಣೆಯ ದಿನಗಳು ಸಮೀಪ ಬಂದಿದ್ದು, ಅಲ್ಲಿ ಯಾವ ಅಭ್ಯರ್ಥಿ ಎಷ್ಟು ಕರಾಮತ್ತು ತೋರಿಸುತ್ತಾರೆ, ಅದು ಫಲಿತಾಂಶದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ತಿಳಿಯಲು ಡಿಸೆಂಬರ್ 14ರ ವರೆಗೆ ಕಾಯಬೇಕು. ಮತದಾರರಿಗೆ ಈ ಬಾರಿಯ ಸಂಕ್ರಾಂತಿ ಭರ್ಜರಿಯಾಗಲಿದೆ ಎಂದು ಹೇಳಲಾಗುತ್ತಿದೆ.