ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ವಿವೇಕರಾವ ಪಾಟೀಲ!

ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ವಿವೇಕರಾವ ಪಾಟೀಲ!


ಬೆಳಗಾವಿ: ಜಿಲ್ಲಾ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಹಾಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಸಮ್ಮುಖದಲ್ಲಿ ಕಮಲ ಪಕ್ಷಕ್ಕೆ ಇಂದು  ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ ಅವರು ಕಳೆದ ವಾರವಷ್ಟೇ ಅವರನ್ನು ಬಿಜೆಪಿಗೆ ಕರೆತಂದಿರುವುದಾಗಿ ಹೇಳಿಕೊಂಡಿದ್ದರು.‌ಆದರೆ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ. ಮಹಾಂತೇಶ ಕವಟಗಿಮಠ ಅವರೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ವಿವೇಕರಾವ ಪಾಟೀಲ ಅವರು ಬಿಜೆಪಿಯ ಯಾವ ವರಿಷ್ಠರನ್ನು ಭೇಟಿಯಾಗಿದ್ದಾರೆ ಮತ್ತು ಯಾರ ಸಮ್ಮುಖದಲ್ಲಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ತಮಗೆ ಗೊತ್ತಿಲ್ಲ ಎಂದಿದ್ದರು.
ಈ ಎಲ್ಲ ಬೆಳವಣಿಗೆ ನಂತರ ರಮೇಶ ಜಾರಕಿಹೊಳಿ ಅವರು ವಿವೇಕರಾವ ಪಾಟೀಲ ಅವರನ್ನು ಕಟೀಲ್ ನಿವಾಸಕ್ಕೆ ಕರೆದುಕೊಂಡು ಹೋಗಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಜೊತೆ ಕಾಣಿಸಿಕೊಂಡಿದ್ದ ವಿವೇಕರಾವ ಅವರು ತಾವು ಪರಿಷತ್ ಚುನಾವಣೆಯಲ್ಲಿ ಲಖನ್ ಹಾಗೂ ಮಹಾಂತೇಶ ಕವಟಗಿಮಠ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರು.
ಕಳೆದ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿವೇಕರಾವ ಅವರು ರಮೇಶ ಜಾರಕಿಹೊಳಿ ಸಹಾಯದಿಂದ ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವೀರಕುಮಾರ ಪಾಟೀಲ ಪರಾಭವಗೊಂಡು, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಕೊನೆಯ ಸುತ್ತಿನಲ್ಲಿ ಅತ್ಯಂತ ಕಡಿಮೆ ಮತಗಳ‌ ಅಂತರದಿಂದ ಗೆಲುವು ಸಾಧಿಸಿದ್ದರು.