ಮತ್ತೆ ಮಂತ್ರಿಯಾಗುವಲ್ಲಿ ಯಶಸ್ವಿಯಾದರೂ ಶಶಿಕಲಾ ಜೊಲ್ಲೆ ಅವರಿಗೆ ತಪ್ಪದ ಸಂಕಷ್ಟ

ಮತ್ತೆ ಮಂತ್ರಿಯಾಗುವಲ್ಲಿ ಯಶಸ್ವಿಯಾದರೂ ಶಶಿಕಲಾ ಜೊಲ್ಲೆ ಅವರಿಗೆ ತಪ್ಪದ ಸಂಕಷ್ಟ

 

ಬೆಳಗಾವಿ: ಭ್ರಷ್ಟಾಚಾರದ ಆರೋಪದ ಹೊರತಾಗಿಯೂ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿ ಮತ್ತೆ ಮಂತ್ರಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಂಕಷ್ಟಗಳು ತಪ್ಪುತ್ತಿಲ್ಲ.

 

ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿಯೇ ಮಹಿಳಾ ಮತ್ತು ಮಕ್ಕಳ ಖಾತೆಯನ್ನು ಕಳಪೆಯಾಗಿ ನಿರ್ವಹಿಸಿದ್ದಕ್ಕಾಗಿ ಆಗಲೇ ಜೊಲ್ಲೆ ಅವರನ್ನು ಕೈಬಿಡುತ್ತಾರೆಂದು ಹೇಳಲಾಗುತ್ತಿತ್ತು. ಮಕ್ಕಳಿಗೆ ನೀಡುವ ಮೊಟ್ಟೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಬಂದ ಮೇಲಂತೂ ಮತ್ತೊಮ್ಮೆ ಅವರು ಸಚಿವರಾಗುವುದು ಸಾಧ್ಯವೇ ಇಲ್ಲ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಶಶಿಕಲಾ ಜೊಲ್ಲೆ ಅವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿ, ಝೀರೋ ಟ್ರಾಫಿಕ್ ನಲ್ಲಿ ಬಂದು ಪ್ರಮಾಣವಚನ ಸ್ವೀಕರಿಸಿದರು. ಅದು ಸ್ವಪಕ್ಷೀಯರೇ ಹುಬ್ಬೇರಿಸುವಂತೆ ಮಾಡಿತು.

 

ಆಗಿರುವ ಬದಲಾವಣೆಯೆಂದರೆ, ಮೊದಲಿದ್ದ ಮಹಿಳಾ ಮತ್ತು ಮಕ್ಕಳ ಖಾತೆಯನ್ನು ಅವರಿಂದ ಕಸಿದುಕೊಂಡು, ಅಷ್ಟೇನೂ ಪ್ರಾಮುಖ್ಯವಲ್ಲದ ಮುಜರಾಯಿ ಖಾತೆಯನ್ನು ಜೊಲ್ಲೆ ಅವರಿಗೆ ನೀಡಲಾಗಿದೆ. ಶಶಿಕಲಾ ಜೊಲ್ಲೆ ಅವರು ಪ್ರಯಶ್ವಿತ ಪಡಲಿ ಎಂದೇ ಅವರಿಂದ ಮೊಟ್ಟೆ ಖಾತೆ ಕಸಿದುಕೊಂಡು ಮುಜರಾಯಿ ಎನ್ನುವ ಪ್ರಾಯಶ್ಚಿತ ಖಾತೆಯನ್ನು ನೀಡಲಾಗಿದೆ ಎಂದು ಭಾನುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

 

ವಿಷಯ ಇಷ್ಟಕ್ಕೇ ನಿಂತಿಲ್ಲ. ಮತ್ತೊಮ್ಮೆ ಸಚಿವೆಯಾಗಿರುವ ಜೊಲ್ಲೆ ಅವರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿಯನ್ನು ಮುಂದುವರಿಸಲಾಗಿದೆ. ಆದರೆ, ವಿಜಯಪುರದಲ್ಲಿ ಶಶಿಕಲಾ ಜೊಲ್ಲೆ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದು, ಕಳೆದೊಂದು ವಾರದಲ್ಲಿ ಎರಡು ಬಾರಿ ಅಲ್ಲಿನ ಮಹಿಳೆಯರು ಸಚಿವೆ ಜೊಲ್ಲೆ ಅವರನ್ನು ಘೇರಾವ್ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಜೊಲ್ಲೆ ಅವರು ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುವಂತಾಗಿದೆ.