ಸವದತ್ತಿಯ ಶ್ರೀ ಯಲ್ಲಮ್ಮ ದೇವಸ್ಥಾನ ಓಪನ್; ಮೊದಲ‌ ದಿನವೇ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

ಸವದತ್ತಿಯ ಶ್ರೀ ಯಲ್ಲಮ್ಮ ದೇವಸ್ಥಾನ ಓಪನ್; ಮೊದಲ‌ ದಿನವೇ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು
ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ತೆರೆಯಲು‌ ಇಂದಿನಿಂದ ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನವೇ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ದೇವಿ ದರ್ಶನಕ್ಕಾಗಿ ಹಲವು ಭಕ್ತಾಧಿಗಳು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸೋಮವಾರ ರಾತ್ರಿಯೇ ಯಲ್ಲಮ್ಮನ ಗುಡ್ಡಕ್ಕೆ ಬಂದು ತಂಗಿದ್ದರು. ದೇವಿ ದರ್ಶನ ಆರಂಭ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು ಸಿಂಗರಿಸಲಾಗಿದೆ. ಮಂಗಳವಾರ ಬೆಳ್ಳಂಬೆಳಗ್ಗೆಯೇ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ನೀಡಲಾಯಿತು. ಕೋವಿಡ್-19 ಮಾರ್ಗಸೂಚಿ ಅನ್ವಯ ಭಕ್ತರು ದೈಹಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಯಲ್ಲಮ್ಮ ದೇವಿ ದರ್ಶನ ಪಡೆದು ಖುಷಿಪಟ್ಟರು. ದೇವಸ್ಥಾನ ಪ್ರಾಂಗಣದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿದ ನಂತರ, ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಯಿತು.
ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಇತರರು ಹಾಜರಿದ್ದರು. ಕಳೆದ ಒಂದೂವರೆ ವರ್ಷದಲ್ಲಿ 20 ದಿನಗಳಷ್ಟೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ದರ್ಶನಕ್ಕೆ ದೇವಸ್ಥಾನ ಮುಕ್ತಗೊಳಿಸಿದ್ದರಿಂದ ಸಂತಸಗೊಂಡ ಭಕ್ತರು ದೇವಿ ದರ್ಶನ ಪಡೆದು, ಗುಡ್ಡದಲ್ಲಿ ವಿಧಿವತ್ತಾಗಿ ಧಾರ್ಮಿಕ ಆಚರಣೆಗಳನ್ನೂ ಕೈಗೊಂಡು ಖುಷಿಪಟ್ಟರು. ಗುಡ್ಡಕ್ಕೆ ಸಂಪರ್ಕಿಸುವ ಮಾರ್ಗಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ.