40 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರಂತೆ! ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಮಾಜಿ ಶಾಸಕ ರಾಜು ಕಾಗೆ ಹೇಳಿಕೆ  

40 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರಂತೆ! ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಮಾಜಿ ಶಾಸಕ ರಾಜು ಕಾಗೆ ಹೇಳಿಕೆ   

 

ಬೆಳಗಾವಿ: ಕಾಗವಾಡ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಅವರು ನಿನ್ನೆ ಮಾಧ್ಯಮದವರಿಗೆ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ. ‘ಸುಮಾರು 40 ಮಂದಿ ಬಿಜೆಪಿ ಶಾಸಕರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ’ ಎಂದು ರಾಜು ಕಾಗೆ ಹೇಳಿದ್ದರು.

 

ರಾಜು ಕಾಗೆ ಹೇಳಿಕೆಯನ್ನು ಇತರೆ ಸಂದರ್ಭಗಳು ಮತ್ತು ಪ್ರಮುಖ ನಾಯಕರ ಹೇಳಿಕೆಗಳಿಗೆ ತಾಳೆ ಹಾಕುವ ಕೆಲಸದಲ್ಲಿ ರಾಜಕೀಯ ವಿಶ್ಲೇಷಕರು ನಿರತರಾಗಿದ್ದಾರೆ. ವಿಶೇಷವೆಂದರೆ, ಇತ್ತೀಚಿಗೆ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ‘ಆಪರೇಷನ್ ಹಸ್ತ’ದ ಬಗ್ಗೆ ಸುಳಿವು ನೀಡಿದ್ದಲ್ಲದೆ, ಪ್ರಮುಖ ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಸರ್ಕಾರ ಎಚ್ಚರಿದಿಂದ ಇರಬೇಕು ಎಂದು ಸಲಹೆ ನೀಡಿದ್ದರು.

 

ಯಡಿಯೂರಪ್ಪ ಅವರು ನೀಡಿದ ಸುಳಿವಿನ ಬೆನ್ನಲ್ಲೇ ಬಂದಿರುವ ರಾಜು ಕಾಗೆ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. “ಬೆಳಗಾವಿ ಜಿಲ್ಲೆಯ ಮೂರು ಸಚಿವರನ್ನು ಹೊಸ ಸಚಿವ ಸಂಪುಟದಲ್ಲಿ ಕೈಬಿಡಲಾಗಿದೆ. ಇದರಿಂದ ಅವರೆಲ್ಲ ಮುನಿಸಿಕೊಂಡಿದ್ದು, ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ” ಎಂದು ಕಾಗೆ ಹೇಳಿರುವುದು ಮತ್ತು ಅದಕ್ಕೆ ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡದೇ ಇರುವುದು ‘ಬೆಂಕಿ ಇಲ್ಲದೆ ಹೊಗೆ ಬರುತ್ತದೆಯೇ’ ಎನ್ನುವ ಗಾದೆಗೆ ಹೋಲುತ್ತದೆ.

 

‘ಆಪರೇ‍ಷನ್ ಕಮಲ’ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಉಪಚುನಾವಣೆ ಸಂದರ್ಭದಲ್ಲಿ ಪಕ್ಷ ಟಿಕೆಟ್ ನೀಡಿತ್ತು. ಬಿಜೆಪಿ ಟಿಕೆಟ್ ವಂಚಿತರಾಗಿದ್ದ ರಾಜು ಕಾಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದರು. ಅದಕ್ಕೂಮೊದಲು ರಾಜು ಕಾಗೆ ನಾಲ್ಕು ಬಾರಿ ಶಾಸಕನಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

 

ಕೇಂದ್ರದಲ್ಲಿ ಮೋದಿ ಆಡಳಿತ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಕೆಟ್ಟ ಆಡಳಿತದಿಂದ ಜನತೆ ಕಂಗಾಲಾಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ನಾಯಕರ ಮಾತುಗಳನ್ನು ನಂಬಬೇಡಿ. ಜನರ ಬಳಿಗೆ ಹೋಗಿ ಕೇಳಿ. ಜನರ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಅದಕ್ಕೆ ಬಿಜೆಪಿ ದುರಾಡಳಿತವೇ ಕಾರಣ. ಜನರ ನಾಡಿಮಿಡಿತ ತಿಳಿದಿರುವ ನಾಯಕರು ಈಗ ಬಿಜೆಪಿ ತೊರೆಯಲು ಮುಂದಾಗಿದ್ದಾರೆ ಎಂದು ಕಾಗೆ ಹೇಳಿದ್ದಾರೆ.

 

‘ಆಪರೇಷನ್ ಹಸ್ತ’ ದ ಕುರಿತಂತೆ ರಾಜು ಕಾಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಗೊಳಿ, ಕಾಗೆ ಹೇಳಿಕೆಯನ್ನು ಅಲ್ಲಗಳೆದಿಲ್ಲ. “ಎಷ್ಟು ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎನ್ನುವುದು ನಿಖರವಾಗಿ ಗೊತ್ತಿಲ್ಲ. ಆದರೆ ಈ ಬಗ್ಗೆ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ” ಎಂದು ಸತೀಶ ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.