ಸಚಿವ ಸಂಪುಟ ಸಭೆ; ಕಿತ್ತೂರು ಕರ್ನಾಟಕ ನಾಮಕರಣಕ್ಕೆ ಅಸ್ತು, ಡಿ.13 ರಿಂದ ಬೆಳಗಾವಿಯಲ್ಲಿ ಅಧಿವೇಶನ  

ಸಚಿವ ಸಂಪುಟ ಸಭೆ; ಕಿತ್ತೂರು ಕರ್ನಾಟಕ ನಾಮಕರಣಕ್ಕೆ ಅಸ್ತು, ಡಿ.13 ರಿಂದ ಬೆಳಗಾವಿಯಲ್ಲಿ ಅಧಿವೇಶನ   

 

ಬೆಳಗಾವಿ: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದೆ.

 

ಹೈದರಾಬಾದ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಬಳಿಕ ಮುಂಬೈ ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಲು ಒತ್ತಡ ಹೆಚ್ಚಾಗಿತ್ತು. ಈ ಬಗ್ಗೆ ಇತ್ತೀಚಿಗೆ ನಡೆದ ಕಿತ್ತೂರು ಉತ್ಸವದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಕರ್ನಾಟಕ ನಾಮಕರಣದ ಬಗ್ಗೆ ಭರವಸೆ ನೀಡಿದ್ದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅದರಂತೆ ಪ್ರಸ್ತಾವಣೆಗೆ ಒಪ್ಪಿಗೆ ದೊರಕಿದೆ.

 

ಇನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13 ರಿಂದ 24 ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದ ತಯಾರಿಗಳು ನಡೆದಿದ್ದು, ಇಂದು ಮಧ್ಯಾಹ್ನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.