ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಸಹೋದರನನ್ನು ಇಳಿಸಲು ಶಾಸಕಿ ಹೆಬ್ಬಾಳಕರ‌ ತಯಾರಿ?

ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಸಹೋದರನನ್ನು ಇಳಿಸಲು ಶಾಸಕಿ ಹೆಬ್ಬಾಳಕರ‌ ತಯಾರಿ?

ಬೆಳಗಾವಿ: ಇಲ್ಲಿಯ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ‌ ಅವರು‌ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಲು‌ ತಯಾರಿ ನಡೆಸುತ್ತಿದ್ದಾರೆಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.


ಈ ಹಿನ್ನೆಲೆಯಲ್ಲಿ‌ ಅವರು ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕಿ ಹಾಗೂ ಅವರ ಸಹೋದರ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ‌ ಹರಿದಾಡುತ್ತಿವೆ.


ಈ ವರ್ಷ್ಯಾಂತ್ಯಕ್ಕೆ ಸ್ಥಳೀಯ ಸಂಘ ಸಂಸ್ಥೆ ಕ್ಷೇತ್ರಗಳ ಎರಡು ವಿಧಾನ ಪರಿಷತ್ ಸ್ಥಾನಗಳ ಅವಧಿ ಪೂರ್ಣಗೊಳ್ಳಲಿದೆ. ಆ ಮೂಲಕ ಬಿಜೆಪಿಯಿಂದ ಗೆದ್ದಿರುವ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ಆಗಿ ಗೆದ್ದಿರುವ ವಿವೇಕರಾವ ಪಾಟೀಲ ಅವರುಗಳ ಅವಧಿ ಕೊನೆಗೊಳ್ಳಲಿದೆ. 


ಈ ಬಾರಿಯೂ ಕೂಡ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅಖಾಡಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ವಿವೇಕರಾವ ಪಾಟೀಲ‌ ಅವರು ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದರೆ ಕಳೆದ ಬಾರಿಯಂತೆ ಮತ್ತೆ ಅವರು ಪಕ್ಷೇತರರಾಗಿ ಸ್ಪರ್ಧಿಸಬಹುದು.


ಈ ನಡುವೆ ಲಖನ್ ಜಾರಕಿಹೊಳಿ ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಆಸಕ್ತಿ‌ ಹೊಂದಿದ್ದಾರೆಂದು ಹೇಳಲಾಗುತ್ತಿದೆ.