”ನಾನು ಏನೇ ಮಾತನಾಡಿದ್ರೂ ಉಲ್ಟಾ ಹಾಕ್ತೀರಿ”; ಮಾಧ್ಯಮಗಳ ಬಗ್ಗೆ ರಮೇಶ ಜಾರಕಿಹೊಳಿ ಅಸಮಾಧಾನ  

”ನಾನು ಏನೇ ಮಾತನಾಡಿದ್ರೂ ಉಲ್ಟಾ ಹಾಕ್ತೀರಿ”; ಮಾಧ್ಯಮಗಳ ಬಗ್ಗೆ ರಮೇಶ ಜಾರಕಿಹೊಳಿ ಅಸಮಾಧಾನ   

 

ಬೆಂಗಳೂರು: ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಕೊಳ್ಳಲು ಕಸರತ್ತು ನಡೆಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿರುವ ಹೊತ್ತಿನಲ್ಲಿ ಅವರನ್ನು ಭೇಟಿಯಾಗಿರುವ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ನಿವಾಸದ ಹೊರಗೆ ತಮ್ಮನ್ನು ಭೇಟಿಯಾದ ಮಾಧ್ಯಮದ ಪ್ರತಿನಿಧಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.

 

“ನಾನೇನೂ ಮಾತನಾಡೋದಿಲ್ಲ. ಏನೇ ಹೇಳಿದ್ರೂ ಅದನ್ನು ಉಲ್ಟಾ ಹಾಕ್ತೀರಿ. ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ಮ ಬಾಳು ಹಿಂಗ್ಯಾಕಾಗ್ತಿತ್ತು” ಎಂದು ಅಸಮಾಧಾನ ಹೊರಹಾಕಿದರು. ಹಾಗೆ ಮಾತನಾಡುತ್ತಲೇ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಪ್ರಯಾಣ ಬೆಳೆಸಿದರು.

 

ಉಪಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ಸುದ್ದಿ ಬಂದಾಗಿನಿಂದ ರಮೇಶ ಜಾರಕಿಹೊಳಿ ಮತ್ತೆ ಚುರುಕಾಗಿದ್ದಾರೆ. ಪಕ್ಷದ ವರಿಷ್ಠರ ಭೇಟಿಗಾಗಿ ಹಲವು ಬಾರಿ ದೆಹಲಿ ಪ್ರಯಾಣ ನಡೆಸಿ ಬಂದಿರುವ ಅವರು, ಇತ್ತೀಚಿಗೆ ಟೆಂಪಲ್ ರನ್ ಕೂಡ ನಡೆಸಿದ್ದಾರೆ. ಅವರು ಕೇದಾರನಾಥ ಕ್ಷೇತ್ರಕ್ಕೆ ಹೋಗಿರುವ ವಿಡಿಯೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

 

ಜೊತೆಗೆ ನಿನ್ನೆಯಷ್ಟೇ ರಮೇಶ ಜಾರಕಿಹೊಳಿ ಅಥಣಿಯಲ್ಲಿ ಆರ್.ಎಸ್.ಎಸ್ ನ ಉತ್ತರ ಕರ್ನಾಟಕ ಪ್ರಾಂತ ಸಂಚಾಲಕ ಅರವಿಂದ ದೇಶಪಾಂಡೆ ಅವರನ್ನು ಭೇಟಿಯಾಗಿದ್ದರು. ಇಂದು ಮತ್ತೆ ಬೆಂಗಳೂರಿನಲ್ಲಿ ಆರ್.ಟಿ.ನಗರದಲ್ಲಿನ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.