ಬಡಾಲ ಅಂಕಲಗಿ ದುರ್ಘಟನೆ; ಟ್ವೀಟ್ ಮಾಡಿದ ಪ್ರಧಾನಿ ಮೋದಿ; ರೂ. 2 ಲಕ್ಷ ಪರಿಹಾರ ಘೋಷಣೆ  

ಬಡಾಲ ಅಂಕಲಗಿ ದುರ್ಘಟನೆ; ಟ್ವೀಟ್ ಮಾಡಿದ ಪ್ರಧಾನಿ ಮೋದಿ; ರೂ. 2 ಲಕ್ಷ ಪರಿಹಾರ ಘೋಷಣೆ   

ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿಯಲ್ಲಿ ನಿನ್ನೆ ರಾತ್ರಿ ಮನೆ ಕುಸಿದು ಮೂರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, ಈ ಬಗ್ಗೆ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಬದುಕುಳಿದಿರುವ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

 

ಅಲ್ಲದೆ, ಸಾವಿಗೀಡಾದ ವ್ಯಕ್ತಿಗಳ ಪರಿಹಾರವಾಗಿ ತಲಾ ರೂ.2 ಲಕ್ಷದಂತೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿ ಅಡಿಯಲ್ಲಿಕುಟುಂಬದ ಬದುಕುಳಿದಿರುವ ಸದಸ್ಯರಿಗೆ ಪರಿಹಾರ ನೀಡಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ನಿನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.

 

ನಿನ್ನೆ ರಾತ್ರಿಯೇ ಮೃತರ ಸಾಮೂಹಿಕ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತದ ವತಿಯಿಂದ ಅದೇ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಮೃತಪಟ್ಟಿದ್ದ ಒಂದೇ ಕುಟುಂಬರ ಆರು ಮಂದಿಯ ಅಂತ್ಯಕ್ರಿಯೆ ಒಂದು ಕಡೆಯಾದರೆ, ಪಕ್ಕದ ಮನೆಯ ಬಾಲಕಿಯ ಅಂತ್ಯಕ್ರಿಯೆಯನ್ನು ಪ್ರತ್ಯೇಕವಾಗಿ ನೆರವೇರಿಸಲಾಗಿದೆ.

ಎಂಟು ಜನರಿದ್ದ ಖನಗಾಂವಿ ಕುಟುಂಬದಲ್ಲಿ ಇಬ್ಬರು ಪುರುಷರು ಮಾತ್ರ ಬದುಕಿದ್ದು, ಉಳಿದವರೆಲ್ಲ ಜೀವಂತ ಸಮಾಧಿಯಾಗಿದ್ದಾರೆ. ಬದುಕುಳಿದಿರುವ ಇಬ್ಬರು ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಮನೆ ಹಳೆಯದಾಗಿದ್ದರಿಂದ ಅದನ್ನು ಬಿಚ್ಚಿ ಹೊಸದಾಗಿ ಕಟ್ಟಲು ಕುಟುಂಬಸ್ಥರು ಮುಂದಾಗಿದ್ದರು. ಅದಕ್ಕಾಗಿ ಮನೆಯ ಹೊರಗೆ ಶೆಡ್ ಹಾಕಿ ವಾಸವಾಗಿದ್ದರು. ಆದರೆ ನಿನ್ನೆ ಭಾರೀ ಮಳೆಯ ಕಾರಣ ಶೆಡ್ ಬಿಟ್ಟು ಹಳೆದ ಮನೆಯೊಳಗೆ ಹೋಗಿದ್ದರು. ಆಗಲೇ ದುರಂತ ಸಂಭವಿಸಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸ್ಥಳದಲ್ಲಿಯೇ ಬೀಡುಬಿಟ್ಟು ಕಾರ್ಯಾಚರಣೆಗೆ ಕೈಜೋಡಿಸಿದರು.