ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ ಕಲ್ಪಿಸಿದ್ದ ಅಧಿಕಾರಿಗಳಿಗೆ ಸಂಕಷ್ಟ; ಕಾರಣ ಕೇಳಿದ ಹೈಕೋರ್ಟ್

ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ ಕಲ್ಪಿಸಿದ್ದ ಅಧಿಕಾರಿಗಳಿಗೆ ಸಂಕಷ್ಟ; ಕಾರಣ ಕೇಳಿದ ಹೈಕೋರ್ಟ್

ಬೆಳಗಾವಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು‌ ಝೀರೋ ಟ್ರಾಫಿಕ್ ನಲ್ಲಿ ಬಂದು ಪ್ರಮಾಣವಚನ ಸ್ವೀಕರಿಸಿದ್ದು ಭಾರೀ ಸುದ್ದಿ ಮಾಡಿತ್ತಲ್ಲದೆ, ಬಿಜೆಪಿ ರಾಜ್ಯ ನಾಯಕರ ಹುಬ್ಬೇರುವಂತೆ ಮಾಡಿತ್ತು. ಆ ಸುದ್ದಿ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 
ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಒದಗಿಸುವ ನಿರ್ಧಾರ ಯಾರದ್ದು ಎಂದು ಕೇಳುವ ಮೂಲಕ ಹೈಕೋರ್ಟ್ ಅಧಿಕಾರಿಗಳಿಗೆ ಬಿಸಿ‌ ಮುಟ್ಟಿಸಿದೆ. ಈ ಕುರಿತಂತೆ ಸರ್ಕಾರ ಮತ್ತು ಶಶಿಕಲಾ ಜೊಲ್ಲೆ ಅವರಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. 
ನ್ಯಾಯವಾದಿ ಜಿ. ಬಾಲಾಜಿ ನಾಯ್ಡು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಶಶಿಕಲಾ ಜೊಲ್ಲೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು‌ ಎಡಿಜಿಪಿ (ಪೊಲೀಸ್ ಕೇಂದ್ರ ಕಚೇರಿ), ನಗರ ಪೊಲೀಸ್ ಆಯುಕ್ತರು, ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಇವರಿಗೆ ನೊಟೀಸ್ ಜಾರಿಗೊಳಿಸಿದೆ.
ಶಾಸಕಿ ಜೊಲ್ಲೆ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿದ್ದು ಯಾರು? ಈ ನಿರ್ಧಾರ ಸರಿ ಎಂದುಕೊಂಡರೆ ನಾಳೆ ಎಲ್ಲ ಶಾಸಕರೂ ಈ ಸೌಲಭ್ಯ ಕೇಳಬಹುದಲ್ಲವೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ಜೀವಂತ ಹೃದಯ ರವಾನೆಯಂತಹ ತುರ್ತು ಪರಿಸ್ಥಿತ ಇದ್ದರೆ ಒಪ್ಪಬಹುದು. ಆದರೆ ಜೊಲ್ಲೆ‌ ಅವರಿಗೆ ಅಂತಹ ತುರ್ತು ‌ಏನಿತ್ತು ಎಂದು ನ್ಯಾಯಪೀಠ ಕೇಳಿದೆ.