ಬೆಳಗಾವಿಗೂ ಬಂತು ಸ್ಪುಟ್ನಿಕ್ ವ್ಯಾಕ್ಸಿನ್ ; ಒಂದೇ ಲಸಿಕೆ ಸಾಕು

   ಬೆಳಗಾವಿಗೂ ಬಂತು ಸ್ಪುಟ್ನಿಕ್ ವ್ಯಾಕ್ಸಿನ್ ; ಒಂದೇ ಲಸಿಕೆ ಸಾಕು

 

 

ಬೆಳಗಾವಿ: ಕೊರೊನಾ ಮೇಲೆ ಅತ್ಯಂತ ಪರಿಣಾಮಕಾರಿ ಮತ್ತು ಕಡಿಮೆ ಪ್ರಮಾಣದ ಅಡ್ಡ ಪರಿಣಾಮಗಳನ್ನು ಹೊಂದಿರುವ ಸ್ಪುಟ್ನಿಕ್ ವ್ಯಾಕ್ಸಿನ್ ಈಗ ಬೆಳಗಾವಿಯಲ್ಲಿಯೂ ಲಭ್ಯವಾಗಿದ್ದು, ಇದು ಸಿಂಗಲ್ ಡೋಸ್ ವ್ಯಾಕ್ಸಿನ್ ಆಗಿರುವುದರಿಂದ ಒಂದೇ ಲಸಿಕೆ ತೆಗೆದುಕೊಂಡರೆ ಸಾಕಾಗುತ್ತದೆ.

 

 

ಸದ್ಯಕ್ಕೆ ಶಾಸ್ತ್ರಿ ನಗರದ ಅಪೂರ್ವ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ಲಸಿಕೆ ಲಭ್ಯವಿದೆ. ಬುಧವಾರ ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿ ಅವರು ಅಪೂರ್ವ ಆಸ್ಪತ್ರೆಯಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು. ಸ್ಪುಟ್ನಿಕ್ ಲಸಿಕೆಯನ್ನು ಪಡೆದ 21 ದಿನಗಳಲ್ಲಿ ಇದು ದೇಹದಲ್ಲಿನ ಶೇ.99 ರಷ್ಟು ರೋಗ ಪ್ರತಿಕಾಯಗಳನ್ನು ಬಲವರ್ಧನೆಗೊಳಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.

 

 

ಲಸಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಶಿವಾನಂದ ಮಾಸ್ತಿಹೊಳಿ, ಬೆಳಗಾವಿಯಲ್ಲಿ ಈಗ ಡಬಲ್ ಡೋಸ್ ವ್ಯಾಕ್ಸಿನ್ ಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜೊತೆಗೆ ಸಿಂಗಲ್ ಡೋಸ್ ಸ್ಪುಟ್ನಿಕ್ ವ್ಯಾಕ್ಸಿನ್ ಕೂಡ ಜನರಿಗೆ ಈಗ ಲಭ್ಯವಿದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ವಿಜಯಪುರದ ನಂತರ ಈಗ ಬೆಳಗಾವಿಯಲ್ಲಿ ಈ ಲಸಿಕೆ ಲಭ್ಯವಾಗಿದೆ. ಲಸಿಕೆಯನ್ನು ಲಭ್ಯವಾಗುವಂತೆ ಮಾಡಿರುವ ಅಪೂರ್ವ ಆಸ್ಪತ್ರೆಗೆ ಆರೋಗ್ಯ ಇಲಾಖೆ ವತಿಯಿಂದ ಅವರು ಅಭಿನಂದನೆ ಹೇಳಿದರು.

 

 

ಇದೇ ಸಪ್ಟೆಂಬರ್ 17 ರಂದು ಬೆಳಗಾವಿ ತಾಲೂಕಿನಾದ್ಯಂತ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಎಲ್ಲ ಆಸ್ಪತ್ರೆಗಳು ಕೈಜೋಡಿಸಬೇಕೆಂದು ಡಾ.ಮಾಸ್ತಿಹೊಳಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಆಸ್ಪತ್ರೆಯ ಎಂಡಿ ಡಾ.ಶಿವಾನಂದ ಹಳಿಗೌಡ್ರ ಸೇರಿದಂತೆ ಇತರೆ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.