ಇನ್ನು ಮುಂದೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಜೊತೆ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ಧಾರ

ಇನ್ನು ಮುಂದೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಜೊತೆ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ಧಾರ


ಬೆಳಗಾವಿ:‌ ಇದುವರೆಗೆ ಸುಳ್ಳು ಜಾತಿ‌ ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆಯುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತಿತ್ತು. ಇನ್ನು ಮುಂದೆ ಅದನ್ನು ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತಂತೆ ನಾಗರೀಕ ಹಕ್ಕು ನಿರ್ದೇಶನಾಲಯದ ಐಜಿಪಿ ಆದೇಶ ಹೊರಡಿಸಿದ್ದಾರೆ.


ಪ್ರಕರಣ ದಾಖಲಿಸುವಾಗ ಸುಳ್ಳು ಪ್ರಮಾಣಪತ್ರ ಪಡೆದ ವ್ಯಕ್ತಿಯ ಜೊತೆಗೆ ಅದನ್ನು ವಿತರಿಸಿದ ಹಿಂದಿನ‌ ತಹಶಿಲ್ದಾರ ಹೆಸರು, ಪ್ರಮಾಣಪತ್ರ ವಿತರಿಸಲು ವರದಿ ಸಲ್ಲಿಸಿದ‌ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಯವರ ಹೆಸರು ಮತ್ತು ವಿವರಗಳನ್ನು ತಪ್ಪದೆ ನಮೂದಿಸಬೇಕೆಂದು ಆದೇಶ ಹೊರಡಿಸಲಾಗಿದೆ.


ಇದುವರೆಗಿನ‌ ನಿಯಮದಂತೆ ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದು ವಿಚಾರಣೆಯಿಂದ ಸಾಬೀತಾದ ನಂತರ ಅಂತಿಮ ಆದೇಶಕ್ಕಾಗಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಕಳಿಸಿಕೊಡಲಾಗುತ್ತಿತ್ತು. ಸಮಿತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿದ ನಂತರ ತಹಶೀಲದಾರ ಅದನ್ನು ರದ್ದುಗೊಳಿಸುತ್ತಿದ್ದರು. ಬಳಿಕ ಆರೋಪಿ‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿತ್ತು.