ಬೆಳಗಾವಿಯ ಮರಾಠಿ ಭಾಷಿಕ ನಿರ್ಮಿಸಿರುವ ‘ಮುಖವಾಡ ಇಲ್ಲದವನು 84’ ಚಿತ್ರ ಶುಕ್ರವಾರ ತೆರೆಗೆ

0 0

 

ಬೆಳಗಾವಿ : ಬೆಳಗಾವಿ ತಾಲೂಕಿನ ಹಿಂಡಲಗಾ ಬಳಿಯ ಸುಳಗಾ ಗ್ರಾಮದ ಗಣಪತ್ ಪಾಟೀಲ ನಿರ್ಮಿಸಿದ ಕನ್ನಡ ಚಿತ್ರ “ಮುಖವಾಡ ಇಲ್ಲದವನು 84” ಶುಕ್ರವಾರ ದಿ 27 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಓಂ ನಮಃ ಶಿವಾಯ ಮೂವೀಸ್​ ಲಾಂಛನದಲ್ಲಿ  ಸಿದ್ಧವಾದ ಈ  ಚಿತ್ರ ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿದೆ.  ಈ ಚಿತ್ರದ ಟ್ರೇಲರ್​ ಲಾಂಚ್​ ಬಿಡುಗಡೆ ಇತ್ತೀಚಿಗೆ ಬೆಂಗಳೂರಿನ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಈ ಹೊಸಬರ ತಂಡದ ಶ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್​ ಅತಿಥಿಯಾಗಿ ಆಗಮಿಸಿ ಟ್ರೇಲರ್​ ಲಾಂಚ್​ ಮಾಡಿದರು.

ಬೆಳಗಾವಿ ಮೂಲದ ಗಣಪತಿ ಪಾಟೀಲ್​ ನ್ಯೂಜಿಲ್ಯಾಂಡ್ ನಲ್ಲಿ ವೈದ್ಯಕೀಯ ವೃತಿಯಲ್ಲಿದ್ದು ತುಂಬ ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದೆನಿಸಿದಾಗ ‘ಮುಖವಾಡ ಇಲ್ಲದವನು 84’ ಮೂಲಕ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ತಂಡ, ಬಿಡುಗಡೆಯ ಸಿದ್ಧತೆ ಮಾಡಿಕೊಂಡಿದೆ

ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿ, ಎರಡು ವರ್ಷಗಳ ಹಿಂದೆ ಸಿನಿಮೋತ್ಸವದಲ್ಲಿ ನಿರ್ಮಾಪಕ ಪಾಟೀಲರ ಪರಿಚಯವಾಯಿತು. ಅವರಲ್ಲಿ ಸಿನಿಮಾ ಬಗ್ಗೆ ಅಪಾರ ಹಸಿವು ಮತ್ತು ತುಡಿತ ಇದೆ. ಸಿನಿಮಾ ಮಾಡುತ್ತಿರುವ ಬಗ್ಗೆಯೂ ಅವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರ ಸಿದ್ಧವಾಗಿದೆ. ಚಿತ್ರಮಂದಿರಗಳೂ ಹಸಿದು ಕುಳಿತಿವೆ. ಬೇಗ ಚಿತ್ರಮಂದಿರಕ್ಕೆ ಬನ್ನಿ ಎಂದು ತಂಡಕ್ಕೆ ಹಾರೈಸಿದರು.

ನಿರ್ಮಾಪಕ ಪಾಟೀಲ ಮಾತನಾಡುತ್ತ, ಎರಡು ವರ್ಷದ ಹಿಂದೆ ಮತ್ತೊಬ್ಬ ನಿರ್ದೇಶಕ  ಶಿವಕುಮಾರ್ ಕಡೂರ್  ಪರಿಚಯವಾಯಿತು. ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಅಂತಿಮವಾಗುತ್ತಿದ್ದಂತೆ, ಒಂದೇ ವಾರದಲ್ಲಿ ಶೂಟಿಂಗ್​ ತಯಾರಿ ನಡೆಸಿ 40 ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು. ತುಂಬ ವಿಭಿನ್ನ ಶೈಲಿಯ ಸಿನಿಮಾ ಇದು. ಡೈಲಾಗ್​ಗಳಲ್ಲಿ ತುಂಬ ಅರ್ಥವಿದೆ ಎಂದರು.

ಚಿತ್ರದಲ್ಲಿ ಶಿವಕುಮಾರ್ ಕಡೂರು ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ. ಈ ಮೊದಲು “ಡ್ರೆಸ್​ ಕೋಡ್​” ಚಿತ್ರ ಮಾಡಿದ ಅನುಭವ ಅವರಿಗಿದೆ. ‘ನಾಲ್ಕು ವರ್ಷ ಸಾಧುಗಳ ಸಂಗ ಮಾಡಿ ಆಧ್ಯಾತ್ಮ, ವೈರಾಗ್ಯದ ಮೊರೆ ಹೋಗಿದ್ದೆ. ಆ ವೇಳೆಯಲ್ಲಿ “ಮುಖವಾಡ ಇಲ್ಲದವನು” ಎಂಬ ಪುಸ್ತಕವನ್ನೂ ಬರೆದಿದ್ದೆ. ಸಾಧು ಸಂತರಿಂದ ಕಲಿತದ್ದನ್ನೇ ಇದೀಗ ಸಿನಿಮಾ ಮಾಡಿದ್ದೇನೆ. ಸುವರ್ಣಮುಖಿ, ಬನ್ನೇರುಘಟ್ಟ, ಚಿಕ್ಕಮಗಳೂರು, ಬೆಳಗಾವಿ, ಅಂಬೂಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ’ ಎಂದರು.

ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್​ ಮತ್ತು ಹರೀಶ್​ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ ದೊರೆತಿದೆ.


Leave a comment