ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನ ಬೆಂಗಳೂರಿಗೆ; ಇದರ ಹಿಂದಿದೆಯಂತೆ ಬಿಜೆಪಿಯ ಚುನಾವಣಾ ಲೆಕ್ಕಾಚಾರ

0 6

ಬೆಳಗಾವಿ: ಇಂದು ಮುಂಜಾನೆ ನಡೆದ ಸಚಿವ ಸಂಪುಟದಲ್ಲಿ ಡಿಸೆಂಬರ್ 7 ರಿಂದ 15 ರ ವರೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಪ್ರತಿವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ವಿಧಾನಸೌಧದಲ್ಲಿ ನಡೆಸುವುದು ವಾಡಿಕೆ. ಆದರೆ ವಾಡಿಕೆಗೆ ತೀಲಾಂಜಲಿ ನೀಡಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ ಇದರ ಹಿಂದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಶೀಘ್ರವೇ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರೂ ಕ್ಷೇತ್ರಗಳಲ್ಲಿಯೂ ಮರಾಠರು ಮತ್ತು ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೀಗಾಗಿ ಸರ್ಕಾರ ಅವರ ಓಲೈಕೆಯಲ್ಲಿ ತೊಡಗಿದೆ. ಇದೇ ಕಾರಣಕ್ಕೆ ತರಾತುರಿಯಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಲಾಗಿದೆ. ವಿಶೇಷವೆಂದರೆ ಯಾವ ಜಾತಿಯ ಪ್ರಾಧಿಕಾರಕ್ಕೂ ನೀಡದಷ್ಟು ಹೆಚ್ಚಿನ ಹಣ (ರೂ.50 ಕೋಟಿ)ವನ್ನು ಈ ಪ್ರಾಧಿಕಾರಕ್ಕೆ ಘೋಷಿಸಲಾಗಿದೆ.

ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ಬೆಳಗಾವಿಯ ಬದಲು ಬೆಂಗಳೂರಿನಲ್ಲಿ ನಡೆಸುವುದರ ಹಿಂದೆಯೂ ಇದೇ ಚುನಾವಣಾ ತಂತ್ರಗಾರಿಕೆ ಇದೆ ಎಂದು ಹೇಳಲಾಗುತ್ತಿದೆ. ಅದು ಹೇಗೆಂದರೆ, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನಗಳನ್ನು ಎಂಇಎಸ್ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಸುವರ್ಣಸೌಧದಲ್ಲಿ ಅತ್ತ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೆ, ಅದಕ್ಕೆ ಪರ್ಯಾಯವಾಗಿ ಎಂಇಎಸ್ ಮರಾಠಿ ಮಹಾಮೇಳಾವ ನಡೆಸುತ್ತದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನವೆಂದರೆ ಅದು ಮರಾಠಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಂದು ಎಂಇಎಸ್ ವಾದಿಸುತದೆ ಮತ್ತು ಮರಾಠಿ ಭಾಷಿಕರನ್ನು ಪ್ರಚೋದಿಸುತ್ತದೆ. ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದಲೂ ನಾಯಕರು ಬಂದು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಹೋಗುತ್ತಾರೆ. ಈ ಮೂಲಕ ಕನ್ನಡಿಗರನ್ನು ಕೆರಳಿಸುವ ಕೆಲಸ ನಡೆಯುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಈಗ ಮರಾಠಿಗರ ಓಲೈಕೆಯಲ್ಲಿ ತೊಡಗಿದ್ದು, ಒಂದು ವೇಳೆ ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ತನ್ನ ಪ್ರಯತ್ನಗಳಿಗೆ ಹಿನ್ನೆಡೆಯಾಗುವ ಆತಂಕ ಸರ್ಕಾರಕ್ಕಿದೆ. ಅದೇ ದೊಡ್ಡದಾದರೆ ಮರಾಠಿ ಮತಗಳು ಒಂದು ಕಡೆಯಾಗಿ ತಟಸ್ಥವಾಗಿ ಉಳಿಯುವ ಅಥವಾ ಬೇರೆ ಪಕ್ಷಗಳತ್ತ ವಾಲುವ ಸಾಧ್ಯತೆಯೂ ಇದೆ. ಹೀಗಾಗಿ ವಿಧಾನಮಂಡಲ ಅಧಿವೇಶನವನ್ನೇ ಬೆಳಗಾವಿಯ ಬದಲಾಗಿ ಬೆಂಗಳೂರಿನಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.


Leave a comment