ಪರಿಷತ್ ಚುನಾವಣೆ; ಪಂಚಾಯತಿ ಸದಸ್ಯರ ಅಪಹರಿಸುವ ಶಂಕೆ, ‘ನಾನ್ಯಾರನ್ನೂ ಟೂರಿಗೆ ಕಳಿಸುತ್ತಿಲ್ಲ’ ಎಂದ ಲಕ್ಷ್ಮೀ ಹೆಬ್ಬಾಳಕರ  

ಪರಿಷತ್ ಚುನಾವಣೆ; ಪಂಚಾಯತಿ ಸದಸ್ಯರ ಅಪಹರಿಸುವ ಶಂಕೆ, ‘ನಾನ್ಯಾರನ್ನೂ ಟೂರಿಗೆ ಕಳಿಸುತ್ತಿಲ್ಲ’ ಎಂದ ಲಕ್ಷ್ಮೀ ಹೆಬ್ಬಾಳಕರ   

 

ಬೆಳಗಾವಿ: ಜಿಲ್ಲೆಯ ಎರಡು ಸ್ಥಾನಗಳಿಗೆ ಡಿಸೆಂಬರ್ ೧೦ ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಣದಲ್ಲಿರುವ ಮೂರೂ ಪ್ರಮುಖ ಅಭ್ಯರ್ಥಿಗಳು ಗೆಲುವಿಗಾಗಿ ಆಕಾಶ-ಭೂಮಿ ಒಂದು ಮಾಡುತ್ತಿದ್ದಾರೆ. ಈ ನಡುವೆ ವಿರೋಧಿ ಪಾಳಯದ ಮತಗಳನ್ನು ಕಡಿಮೆಗೊಳಿಸಲು ಪಂಚಾಯತಿ ಸದಸ್ಯರನ್ನು ಯಾಮಾರಿಸಿ ಟೂರಿಗೆ ಕಳಿಸುವ ಷಡ್ಯಂತ್ರ ನಡೆದಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗಂಭೀರ ಆರೋಪ ಮಾಡಿದ್ದಾರೆ.

 

ಈ ಕುರಿತಂತೆ ಶಾಸಕಿ ಹೆಬ್ಬಾಳಕರ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಾತನಾಡಿರುವ ಹೆಬ್ಬಾಳಕರ “ಕೆಲವು ಜನ‘ಲಕ್ಷ್ಮೀ ಹೆಬ್ಬಾಳಕರ್ ಟೂರಿಗೆ ಕರೆದಿದ್ದಾರೆ ಎಂದು ಹೇಳಿ ನಮ್ಮ ಪರವಾಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ದಿನದಂದು ಅವರು ಮತ ಚಲಾವಣೆ ಮಾಡದಂತೆ ತಡೆಯುವ ಷಡ್ಯಂತ್ರ ನಡೆದಿದೆ” ಎಂದು ಆರೋಪಿಸಿದ್ದಾರೆ.

 

“ನಾನು ಯಾರನ್ನೂ ಟೂರಿಗೆ ಕಳಿಸುತ್ತಿಲ್ಲ. ನೀವು ಯಾರ ಮಾತಿಗೂ ಯಾಮಾರಬೇಡಿ. ಇಲ್ಲೇ ಇದ್ದು ನಿಮ್ಮ ಸಂವಿಧಾನ ಬದ್ಧ ಹಕ್ಕು ಚಲಾಯಿಸಿ. ಯಾವುದೇ ಒತ್ತಡಕ್ಕೆ, ಯಾವುದೇ ಧಮ್ಕಿಗೆ ಹೆದರುವ ಅಗತ್ಯತೆ ಇಲ್ಲ. ನಾನು ಯಾರನ್ನೂ ಟೂರಿಗೆ ಕಳಿಸುತ್ತಿಲ್ಲ” ಎಂದು ಹೆಬ್ಬಾಳಕರ ಸ್ಪಷ್ಟನೆ ನೀಡಿದ್ದಾರೆ. “ನಾವು ನ್ಯಾಯಯುತವಾಗಿ ಚುನಾವಣೆ ಮಾಡುತ್ತಿದ್ದೇವೆ. ಎಲ್ಲರೂ ನನಗೆ ಸಹಕಾರ ಮಾಡಿ, ಆಶೀರ್ವಾದ ಮಾಡಿ. ನಿಮ್ಮ ಜೊತೆ ನಿಮ್ಮ ಮನೆ ಮಗಳಾಗಿ ಯಾವಾಗಲೂ ಇರುತ್ತೇನೆ. ನನ್ನ ಕಾಂಗ್ರೆಸ್ ಪಕ್ಷ ಯಾವತ್ತೂ ನಿಮ್ಮ ಇರುತ್ತದೆ. ಸತೀಶ ಜಾರಕಿಹೊಳಿ ಮತ್ತು ಪ್ರಕಾಶ ಹುಕ್ಕೇರಿ ಹಾಗೂ ಅನೇಕ ಮುಖಂಡರ ಆಶೀರ್ವಾದ ಇರುತ್ತದೆ” ಎಂದು ಅವರು ಹೇಳಿದ್ದಾರೆ.

 

ಹೆಬ್ಬಾಳಕರ ಅವರ ಹೇಳಿಕೆಯಿಂದ ಪಂಚಾಯತಿ ಸದಸ್ಯರನ್ನು ಟೂರಿನ ಹೆಸರಿನಲ್ಲಿ ಅವರನ್ನು ಅಪಹರಿಸಿ ಚುನಾವಣೆಯಂದು ಮತ ಚಲಾಯಿಸದಂತೆ ನೋಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ವಿಡಿಯೋದಲ್ಲಿ ಹೆಬ್ಬಾಳಕರ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಕಣದಲ್ಲಿದ್ದಾರೆ.