100 ರೂ. ಸ್ಟ್ಯಾಂಪ್ ಮೇಲಿನ‌ ಬೆಳಗಾವಿಯಲ್ಲಿರುವ ಮನೆಗಳನ್ನು ಸಕ್ರಮಗೊಳಿಸುತ್ತಾರಂತೆ ಶಾಸಕ ಅಭಯ ಪಾಟೀಲ

100 ರೂ. ಸ್ಟ್ಯಾಂಪ್ ಮೇಲಿನ‌ ಬೆಳಗಾವಿಯಲ್ಲಿರುವ ಮನೆಗಳನ್ನು ಸಕ್ರಮಗೊಳಿಸುತ್ತಾರಂತೆ ಶಾಸಕ ಅಭಯ ಪಾಟೀಲ
ಬೆಳಗಾವಿ: ಬೆಳಗಾವಿ ಮಹಾನಗರದಲ್ಲಿ ಸಾವಿರಾರು ಮಂದಿ ರೂ.100 ಸ್ಟ್ಯಾಂಪ್ ಆಧಾರದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಇಂತಹ ಮನೆಗಳು ಕಾನೂನು ಬದ್ಧವಾಗಿ ಸರ್ಕಾರದಲ್ಲಿ ನೋಂದಣಿಯಾಗಿಲ್ಲ. ನಿವೇಶನಗಳ ಲೇಔಟ್ ಅಥವಾ ಎನ್. ಎ. ಆಗಿಲ್ಲ. ಹೀಗಾಗಿ ಇಂತಹ ಮನೆಗಳನ್ನು ಯಾವ ರೀತಿ ಪರಿಗಣಿಸಬೇಕು ಎನ್ನುವುದು ಸ್ಥಳೀಯ ಆಡಳಿತಕ್ಕೆ ಹಲವಾರು ವರ್ಷಗಳಿಂದ ದೊಡ್ಡ ಕಗ್ಗಂಟಾಗಿ ಕಾಡುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ‌ ಚುನಾವಣೆ ಹೊತ್ತಿನಲ್ಲಿ ನಗರದಲ್ಲಿನ ಎಲ್ಲ 100 ರೂ. ಸ್ಟ್ಯಾಂಪ್ ಆಧಾರದಲ್ಲಿನ ಮನೆಗಳನ್ನು ಸಕ್ರಮ ಮಾಡಿಕೊಡುವುದಾಗಿ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ‌ ಮಾಡಿದ ಶಾಸಕ ಅಭಯ ಪಾಟೀಲ, ನಗರದಲ್ಲಿನ ಇಂತಹ ಎಲ್ಲ ಬಡಾವಣೆಗಳಿಗೆ ಮಾನವೀಯತೆ ಆಧಾರದಲ್ಲಿ  ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಅದೇ ರೀತಿ ಸರ್ಕಾರವೂ ಈ  ಮನೆಗಳನ್ನು ಸಕ್ರಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಅಭಯ ಪಾಟೀಲ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಪಾಟೀಲ, ಮುಖ್ಯಮಂತ್ರಿ ಬೊಮ್ಮಾಯಿ‌ ಸಕಾರಾತ್ಮಕವಾಗಿ ‌ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಕ್ರಮವಾಗಿ ನಿರ್ಮಿಸಿದ ನಿವೇಶನಗಳಲ್ಲಿಯೇ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ಸಕ್ರಮಕ್ಕೆ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತರಲು ಕಳೆದ‌ ಎರಡು ದಶಕಗಳಿಂದ ಸರ್ಕಾರಗಳು‌ ಪ್ರಯತ್ನ ಪಡುತ್ತಿವೆ. ಆದರೂ ಅದು ಸಾಧ್ಯವಾಗಿಲ್ಲ. ಒಮ್ಮೆ ರಾಜ್ಯಪಾಲರು ಅಕ್ರಮ-ಸಕ್ರಮ ಯೋಜನೆಯನ್ನು ವಿರೋಧಿಸಿದರೆ ಇನ್ನೊಮ್ಮೆ ನ್ಯಾಯಾಲಯ ಅದಕ್ಕೆ ತಡೆ ನೀಡಿದೆ. ವಿಷಯ ಹೀಗಿರುವಾಗ ಸರ್ಕಾರದಲ್ಲಿ ನೋಂದಣಿಯೇ ಆಗದಿರುವ ಮನೆಗಳನ್ನು ‌ಹೇಗೆ ಸಕ್ರಮ ಮಾಡಿಕೊಡಲಾಗುವುದು ಎನ್ನುವುದನ್ನು ಕಾದು ನೋಡಬೇಕಾಗಿದೆ.