ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತದ ಮೊದಲ ಕ್ರೀಡಾಪಟು ಬೆಳಗಾವಿಯ ಪಡೆಪ್ಪ ಚೌಗುಲೆಗೆ ಗೌರವ ಕೊಡಿಸಲು ಮುಂದಾದ ಶಾಸಕ ಅಭಯ ಪಾಟೀಲ  

ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತದ ಮೊದಲ ಕ್ರೀಡಾಪಟು ಬೆಳಗಾವಿಯ ಪಡೆಪ್ಪ ಚೌಗುಲೆಗೆ ಗೌರವ ಕೊಡಿಸಲು ಮುಂದಾದ ಶಾಸಕ ಅಭಯ ಪಾಟೀಲ   

 

ಬೆಳಗಾವಿ: ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವುದೆಂದರೆ ಯಾವುದೇ ಕ್ರೀಡಾಪಟುವಿಗೆ ಹೆಮ್ಮೆಯ ಮತ್ತು ಗೌರವದ ವಿಚಾರ. ಆದರೆ ಭಾರತದ ಪರವಾಗಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೊದಲ ಕ್ರೀಡಾಪಟು ಬೆಳಗಾವಿಯ ಪಡೆಪ್ಪ ಚೌಗುಲೆ ಎನ್ನುವುದು ಬೆಳಗಾವಿಗರಿಗೆ ಹೆಮ್ಮೆ ತರುವ ವಿಚಾರ. ನೂರು ವರ್ಷಗಳ ಹಿಂದೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಡೆಪ್ಪ ಚೌಗುಲೆ ಅವರಿಗೆ ಸಿಗಬೇಕಾದ ಗೌರವವನ್ನು ಕೊಡಿಸಲು ಮುಂದಾಗಿದ್ದಾರೆ ಬೆಳಗಾವಿ ಶಾಸಕ ಅಭಯ ಪಾಟೀಲ.

 

1920 ಆಗಷ್ಟ 22 ರಂದು ಆಂಟವೆರ್ಪನಲ್ಲಿ ನಡೆದ ಒಲಿಂಪಿಕ್ ಮ್ಯಾರಾಥಾನ್ ನಲ್ಲಿ ಪಡೆಪ್ಪ ಚೌಗುಲೆ ಪಾಲ್ಗೊಂಡಿದ್ದರು. ಮ್ಯಾರಾಥಾನ್ ನಲ್ಲಿ 2 ಗಂಟೆ, 50 ನಿಮಿಷ, 45,2 ಸೆಕೆಂಡ್ ಓಡಿದ್ದ ಅವರು 19ನೇ ಅಥ್ಲಿಟಿಕ್ ಆಗಿ ಹೊರಹೊಮ್ಮಿದ್ದರು. ಆರಂಭದಲ್ಲಿ ಕುಸ್ತಿ ಪಟುವಾಗಿದ್ದ ಚೌಗುಲೆ, ಕುಸ್ತಿ ಆಡುವಾಗ ಆಖಾಡದಲ್ಲಿ ಗಾಯಗೊಂಡಿದ್ದರಿಂದ ಓಟಗಾರರಾಗಿ ತಮ್ಮ ಸಾಧನೆ ಮುಂದುವರಿಸಿದರು. ಓಟಗಾರರಾಗಿ ಅವರು ದೇಶದ ವಿವಿಧೆಡೆ ಹಲವಾರು ಮ್ಯಾರಥಾನ್ ಗಳಲ್ಲಿ ಭಾಗವಹಿಸಿ ಅಮೋಘ ಸಾಧನೆಗೈದಿದ್ದರು.

 

2003 ರಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಚೌಗಲೆ ಅವರ ಚಿತ್ರವಿರುವ ಅಂಚೆ ಲಕೋಟೆಯನ್ನು ಅನಾವರಣಗೊಳಿಸಲಾಗಿತ್ತು. ಅವರ ಸ್ಮರಣಾರ್ಥ ಪ್ರತಿವರ್ಷ ಬೆಳಗಾವಿಯ ಜಿಮಖಾನಾ ಕ್ಲಬ್ ದಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗುತ್ತದೆ. ಆದರೆ ಭಾರತದ ಮೊದಲ ಒಲಿಂಪಿಕ್ ಕ್ರೀಡಾಪಟುವಾಗಿ ಸರ್ಕಾರದಿಂದ ಸಲ್ಲಬೇಕಾಗಿರುವ ಗೌರವ ಪಡೆಪ್ಪ ಚೌಗುಲೆ ಅವರಿಗೆ ಸಿಕ್ಕಿಲ್ಲ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಅಭಯ ಪಾಟೀಲ ಸರ್ಕಾರದ ಗೌರವವನ್ನು ದಿವಂಗತ ಚೌಗುಲೆ ಅವರಿಗೆ ಕೊಡಿಸಲು ಮುಂದಾಗಿದ್ದಾರೆ.

 

ಚೌಗುಲೆ ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ನೂರು ವರ್ಷಗಳು ಗತಿಸಿದ ಹಿನ್ನೆಲೆಯಲ್ಲಿ, ಶತಮಾನದ ಸಂಭ್ರಮೋತ್ಸವ ಆಚರಿಸುವ ಬಗ್ಗೆ ಶಾಸಕ ಪಾಟೀಲ ಯೋಚಿಸಿದ್ದಾರೆ. ಚೌಗುಲೆ ಅವರ ಸಾಧನೆ ಮತ್ತು ಅವರ ಕುರಿತಾದ ಮಾಹಿತಿಗಳು ಸರ್ಕಾರದ ಬಳಿ ಇವೆಯೇ ಅಥವಾ ಇಲ್ಲ ಎನ್ನುವ ಕುರಿತಂತೆ ಶಾಸಕರು ಸರ್ಕಾರವನ್ನು ಪ್ರಶ್ನಿಸಿದ್ದು, ನಾಳೆ ಬುಧವಾರ ವಿಧಾನಸಭೆಯಲ್ಲಿ ಅವರ ಪ್ರಶ್ನೆಗಳಿಗೆ ಸರ್ಕಾರ ಲಿಖಿತ ಉತ್ತರ ನೀಡುವ ಸಾಧ್ಯತೆ ಇದೆ.

 

1902 ರಲ್ಲಿ ಬೆಳಗಾವಿ ನಗರದ ಶಹಾಪುರದಲ್ಲಿನ ಶೇರಿಗಲ್ಲಿಯಲ್ಲಿ ಜನಿಸಿದ್ದ ಪಡೆಪ್ಪ ಚೌಗುಲೆ 1952 ರಲ್ಲಿ ಮೃತಪಟ್ಟರು. ಸರ್ಕಾರದಿಂದ ಅವರಿಗೆ ಸೂಕ್ತ ಗೌರವ ಸಲ್ಲಬೇಕು ಎನ್ನುವುದು ಬೆಳಗಾವಿ ನಾಗರಿಕರ ಹಳೆಯ ಬೇಡಿಕೆಯಾಗಿದೆ. ಈಗ ಶಾಸಕ ಅಭಯ ಪಾಟೀಲ ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿದ್ದಾರೆ.