ಬಡಾಲ ಅಂಕಲಗಿ ದುರ್ಘಟನೆ: ಪರಿಹಾರದ ಚೆಕ್ ವಿತರಿಸಿದ ಸಚಿವ ಗೋವಿಂದ ಕಾರಜೋಳ; ಶಿಥಿಲಾವಸ್ಥೆಯಲ್ಲಿರುವ ಎಲ್ಲ ಮನೆ, ಶಾಲೆಗಳ ಸರ್ವೇಕಾರ್ಯ ಕೈಗೊಳ್ಳಲು ಸೂಚನೆ

ಬಡಾಲ ಅಂಕಲಗಿ ದುರ್ಘಟನೆ: ಪರಿಹಾರದ ಚೆಕ್ ವಿತರಿಸಿದ ಸಚಿವ ಗೋವಿಂದ ಕಾರಜೋಳ; ಶಿಥಿಲಾವಸ್ಥೆಯಲ್ಲಿರುವ ಎಲ್ಲ ಮನೆ, ಶಾಲೆಗಳ ಸರ್ವೇಕಾರ್ಯ ಕೈಗೊಳ್ಳಲು ಸೂಚನೆ

 

ಬೆಳಗಾವಿ: ಬಡಾಲ ಅಂಕಲಗಿಯಲ್ಲಿ ಭಾರೀ ಮಳೆ ಸುರಿದು ಕುಸಿದ ಮನೆಯಿಂದಾಗಿ ನಿನ್ನೆ ರಾತ್ರಿ ಏಳು ಮಂದಿ ಮೃತಪಟ್ಟಿದ್ದರು. ಇಂದು ಮುಂಜಾನೆ ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು.

 

ಭೀಮಪ್ಪ ಖನಗಾಂವಿ ಕುಟುಂಬದ ಆರು ಮಂದಿ ಮೃತಪಟ್ಟಿದ್ದು ಅದಕ್ಕೆ ಸಂಬಂಧಪಟ್ಟಂತೆ ತಲಾ ರೂ.5 ಲಕ್ಷದಂತೆ ಒಟ್ಟು ರೂ.30 ಲಕ್ಷ ಮತ್ತು ಮೃತಪಟ್ಟಿರುವ ಪಕ್ಕದ ಮನೆಯ ಇನ್ನೊಂದು ಬಾಲಕಿ ಶಾಂತವ್ವ ಕೋಳೆಪ್ಪನವರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು. ಪ್ರಧಾನಿ ಮೋದಿ ಕೂಡ ತಲಾ ರೂ.2 ಲಕ್ಷ ಪರಿಹಾರ ಘೋಷಿಸಿದ್ದು, ಶೀಘ್ರದಲ್ಲಿಯೇ ಅದನ್ನು ವಿತರಿಸಲಾಗುವುದು ಎಂದರು.

 

ಘಟನೆಯಲ್ಲಿ ಮೂವರು ಮಕ್ಕಳು ಮೃತರಾಗಿದ್ದು, ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇನ್ನೊಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು, ಅಲ್ಲದೆ ದುರ್ಘಟನೆಯಲ್ಲಿ ಬಿದ್ದಿರುವ ಮನೆಯನ್ನು ಕಟ್ಟಿಕೊಡಲು ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವ ಕಾರಜೋಳ ಹೇಳಿದರು.

 

ಶಿಥಿಲಾವಸ್ಥೆಯಲ್ಲಿ ಇರುವ ಹಳೆಯ ಮನೆಗಳಲ್ಲಿ ವಾಸವಿರುವ ಕುಟುಂಬಗಳನ್ನು ತಕ್ಷಣದಿಂದಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅದಕ್ಕಾಗಿ ಸ್ಥಳೀಯ ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸರ್ವೇ ಕಾರ್ಯ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ವಿಷಯದಲ್ಲಿಯೂ ಇದೇ ಕ್ರಮ ಅನುಸರಿಸಬೇಕು ಎಂದು ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಹಲವಾರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.