ಎಂಇಎಸ್ ಅಧ್ಯಕ್ಷನ ಮುಖಕ್ಕೆ ಮಸಿ ಬಳಿಕ ಕನ್ನಡ ಕಾರ್ಯಕರ್ತರು; ಕ್ಷೀರಾಭಿಷೇಕ; ನಾಳೆ ಬೆಳಗಾವಿ ಬಂದ್ ಕರೆ

ಎಂಇಎಸ್ ಅಧ್ಯಕ್ಷನ ಮುಖಕ್ಕೆ ಮಸಿ ಬಳಿಕ ಕನ್ನಡ ಕಾರ್ಯಕರ್ತರು; ಕ್ಷೀರಾಭಿಷೇಕ; ನಾಳೆ ಬೆಳಗಾವಿ ಬಂದ್ ಕರೆ

ಬೆಳಗಾವಿ: ನಗರದಲ್ಲಿ ಸೋಮವಾರ ಆರಂಭಗೊಂಡಿರುವ ವಿಧಾನ ಮಂಡಲ ಅಧಿವೇಶನಕ್ಕೆ ಸಮಾನಾಂತರವಾಗಿ ಮರಾಠಿ ಮಹಾಮೇಳಾವ್ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾಗಿತ್ತು. ಜಿಲ್ಲಾಡಳಿತದ ಪರವಾನಗಿ ಇಲ್ಲದಿದ್ದರೂ ಮಹಾಮೇಳಾವ್ ನಡೆಸಲು ಎಂಇಎಸ್ ವತಿಯಿಂದ ಟಿಳಕವಾಡಿಯ ವ್ಯಾಕ್ಸಿನ್ ಡೆಪೋದಲ್ಲಿ ಅನಧಿಕೃತವಾಗಿ ಪೆಂಡಾಲ್ ಹಾಕಲಾಗಿತ್ತು. ಅನಧಿಕೃತ ಪೆಂಡಾಲ್ ತೆರವುಗೊಳಿಸಲು ಪೊಲೀಸರು ಮುಂದಾದಾಗ ಕೆಲಕಾಲ ಪೊಲೀಸರು ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ಗದ್ದಲದಲ್ಲಿ ಕನ್ನಡ ಸಂಘಟನೆಯ ಕಾರ್ಯಕರ್ತನೊಬ್ಬ ಎಂಇಎಸ್ ಅಧ್ಯಕ್ಷ ದೀಪಕ ದಳವಿ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿತು.

 

ಎಂಇಎಸ್ ನ ಪ್ರಮುಖ ಮುಖಂಡರಾದ ದೀಪಕ ದಳವಿ, ಯುವ ಮುಖಂಡ ಶುಭಂ ಶೇಳಕೆ, ಮಾಜಿ ಮೇಯರ್ ಶಿವಾಜಿ ಸುಂಠಕರ, ಮಾಜಿ ಶಾಸಕ ಮನೋಹರ ಕಿಣೇಕರ, ಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಮೊದಲಾದವರ ನೇತೃತ್ವದಲ್ಲಿ ಮಹಾಮೇಳಾವ್ ಆಯೋಜಿಸಲಾಗಿತ್ತು. ಪೊಲೀಸರೊಂದಿಗೆ ಗದ್ದಲ ನಡೆಯುತ್ತಿರುವಾಗಲೇ ಕರ್ನಾಟಕ ನವನಿರ್ಮಾಣ ಸೇನೆಯ ಸಂಪತಕುಮಾರ ದೇಸಾಯಿ ಎನ್ನುವ ಕಾರ್ಯಕರ್ತ ಎಂಇಎಸ್ ಅಧ್ಯಕ್ಷ ದೀಪಕ ದಳವಿ ಮುಖಕ್ಕೆ ಮಸಿ ಬಳಿದಿದ್ದಾನೆ. ಕೂಡಲೇ ಪೊಲೀಸರು ಘಟನೆಗೆ ಕಾರಣರಾದ ಕನ್ನಡ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

 

ಘಟನೆಯನ್ನು ಖಂಡಿಸಿದ ಎಂಇಎಸ್ ನ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಟಿಳಕವಾಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಮಸಿ ಬಳಿದ ಕನ್ನಡ ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಯಿತು. ಬಳಿಕ ಎಂಇಎಸ್ ಕಾರ್ಯಕರ್ತರು ದೀಪಕ ದಳವಿ ಅವರಿಗೆ ಕ್ಷೀರಾಭಿಷೇಕ ಮಾಡಿಸಿ ಘೋಷಣೆ ಕೂಗಿದರು. ಅದೇ ಸಂದರ್ಭದಲ್ಲಿ ಮುಖಂಡರು ನಾಳೆ ಬೆಳಗಾವಿ ನಗರ ಬಂದ್ ಘೋಷಣೆ ಮಾಡಿದರು. ಆದರೆ ನಗರದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವಾಗ ಬಂದ್ ಕರೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.