23ರಂದು ಬೆಳಗಾವಿಯಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಪದವೀಧರರಿಗೆ  ಉದ್ಯೋಗ ಮೇಳ: 70 ಕಂಪನಿಗಳು ಭಾಗಿ

23ರಂದು ಬೆಳಗಾವಿಯಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಪದವೀಧರರಿಗೆ  ಉದ್ಯೋಗ ಮೇಳ: 70 ಕಂಪನಿಗಳು ಭಾಗಿ


ಬೆಳಗಾವಿ: ಇಲ್ಲಿನ ಉದ್ಯಮ್ ಬಾಗ್ ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. 


ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜತೆ ಶುಕ್ರವಾರ ಇಲ್ಲಿನ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಅವರು, ಈ ವಿಚಾರ ತಿಳಿಸಿದರು. 


ಓಲಾ, ಎಚ್ಪಿ ಸೇರಿದಂತೆ 34 ಕಂಪನಿಗಳು ಈಗಾಗಲೇ ಮೇಳದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನೂ 70 ಕಂಪನಿಗಳು ಉತ್ಸುಕವಾಗಿವೆ. ಮೇಳವು ಸಂಪೂರ್ಣ ವಾಗಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು,  ಅರ್ಹ ಅಭ್ಯರ್ಥಿಗಳು 'ಸ್ಕಿಲ್ ಕನೆಕ್ಟ್ ಪೋರ್ಟಲ್'ನಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ಅವರು ವಿವರಿಸಿದರು. 


ನೋಂದಣಿ ಮಾಡಿಕೊಂಡ ನಂತರ ಉದ್ಯೋಗದ ಸ್ವರೂಪ, ಯಾವ ಕಂಪನಿಯು ಅಭ್ಯರ್ಥಿಯನ್ನು ಸಂದರ್ಶಿಸಲಿದೆ ಎನ್ನುವ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 


23ರಂದು ನಡೆಯುವ ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ಮರುದಿನವಾದ ಡಿ.24 ರಂದು ಎರಡನೇ ಸುತ್ತಿನ ಸಂದರ್ಶನ ನಡೆಯಲಿದೆ ಎಂದು ಸಚಿವರು ಹೇಳಿದರು. 


ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳಿಗೆ ಏನು ಕೊರತೆ ಇದೆ ಎನ್ನುವುದನ್ನು ಕಂಡುಕೊಂಡು, ಅಂತಹವರಿಗೆ ಸೂಕ್ತ ಮತ್ತು ಅಗತ್ಯ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು. 


80 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ 40 ಸಾವಿರ ಜನರಲ್ಲಿ ಸರಿಯಾದ ಕೌಶಲ್ಯಗಳೇ ಇಲ್ಲ. ಈ ಕೊರತೆಯನ್ನು ನಿವಾರಿಸಲು ಸರಕಾರ ಬದ್ಧವಾಗಿದೆ ಎಂದು ಅವರು ನುಡಿದರು. 


ಸಭೆಯಲ್ಲಿ ಸಚಿವ ಉಮೇಶ ಕತ್ತಿ, ಶಾಸಕರಾದ ಸಂಜಯ ಪಾಟೀಲ, ಪಿ.ರಾಜೀವ್, ಮಹೇಶ ಕುಮಟಹಳ್ಳಿ, ಮಹಾಂತೇಶ ದೊಡ್ಡಗೌಡ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ ಮುಂತಾದವರಿದ್ದರು.