ಶವಸಂಸ್ಕಾರ ಉಚಿತ ಎಂದರೆ ಏನರ್ಥ? ನೀವು ಜನರ‌ ಸಾವನ್ನು ‌ಬಯಸುತ್ತಿರುವಿರೇ ಎಂದು‌ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಎಂ ಬಿ ಪಾಟೀಲ

ಶವಸಂಸ್ಕಾರ ಉಚಿತ ಎಂದರೆ ಏನರ್ಥ? ನೀವು ಜನರ‌ ಸಾವನ್ನು ‌ಬಯಸುತ್ತಿರುವಿರೇ ಎಂದು‌ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಎಂ ಬಿ ಪಾಟೀಲ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ‌ ಸಂಬಂಧಪಟ್ಟಂತೆ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿರುವ ಉಚಿತ ಶವಸಂಸ್ಕಾರ‌ದ ಭರವಸೆ ಈಗ ಭಾರೀ ಟೀಕೆ ಮತ್ತು ವಿವಾದಗಳಿಗೆ ಕಾರಣವಾಗಿದೆ. ಉಚಿತ ಶವಸಂಸ್ಕಾರ ಎಂದರೆ ಏನರ್ಥ? ಬಿಜೆಪಿಯವರು ಜನರ ಸಾವನ್ನು ಬಯಸುತ್ತಿದ್ದಾರೆಯೇ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸುವ ಮೂಲಕ ಬಿಜೆಪಿಯನ್ನು‌ ಮತ್ತಷ್ಟು ಮುಜುಗರಕ್ಕೆ‌ ಒಳಪಡಿಸಿದ್ದಾರೆ.
ಬೆಳಗಾವಿಯಲ್ಲಿಂದು‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದ ಕಾರಜೋಳ ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಉಚಿತ ಶವಸಂಸ್ಕಾರ ವಿಷಯದಿಂದ  ಜನರಿಗೆ ನೋವಾಗಿದ್ದರೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಉದ್ಯೋಗ ನಷ್ಟ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ, ಬೆಲೆ ಏರಿಕೆಯ ಕುರಿತು ಸಹ ಕಾರಜೋಳ ಹಾಗೂ ಬಿಜೆಪಿಗರು ಉತ್ತರಿಸಬೇಕು ಎಂದು ಪಾಟೀಲ್ ಸವಾಲು ಹಾಕಿದರು.
ಕೋವಿಡ್ ಸಂದರ್ಭದಲ್ಲಿ ತಾವು ನೀಡಿರುವ ಆಕ್ಸಿಜನ್ ಸಿಲಿಂಡರ್, ಬೆಡ್, ಔಷಧಿಗಳ ಬಗ್ಗೆ ಬಿಜೆಪಿಯವರು ಹೇಳಬೇಕಾಗಿತ್ತು. ಆದರೆ, ಶವಸಂಸ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ದೇಶದಲ್ಲಿರುವ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ, ದೊಡ್ಡ ದೊಡ್ಡ ಡ್ಯಾಂ ಗಳನ್ನು ಯಾರು ನಿರ್ಮಿಸಿದ್ದು ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಕಳೆದೆರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಬರಲಿಲ್ಲ. ಆದರೆ, ಈಗ ಚುನಾವಣಾ ಪ್ರಚಾರಕ್ಕೆ ಎಲ್ಲರೂ ಓಡಿ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿ ಇನ್ನಿತರರು ಇದ್ದರು.